ಉಡುಪಿ, ನ 27 (DaijiworldNews/SM): ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಪೇಜಾವರ ಹಿರಿಯ ಸ್ವಾಮೀಜಿ ವಿಶ್ವೇಶರ ತೀರ್ಥ ಸ್ವಾಮೀಜಿಯವರು, 'ಬಹುಮತ ಬಾರದೇ ಇದ್ದಲ್ಲಿ ಎಲ್ಲಾ ಪಕ್ಷಗಳು ಸಮಾನ ಯೋಜನೆ ರೂಪಿಸಬೇಕು. ಇದು ಕೇವಲ ಅಧಿಕಾರ ದೃಷ್ಟಿಯಿಂದ ಮಾತ್ರವಲ್ಲ, ನೈತಿಕತೆ ಇಲ್ಲದ ಮೈತ್ರಿ, ನಂತರದ ಒಳ ಜಗಳ ಎಲ್ಲಾ ಬೇಸರ ತಂದಿದೆ. ಶಿವಸೇನೆಗೂ ಕಾಂಗ್ರೆಸ್ಗೂ ಎಲ್ಲಿಯ ಸಂಬಂಧ? ಎಂದು ಅವರು ಪ್ರಶ್ನಿಸಿದ್ದಾರೆ.
ಬಿಜೆಪಿಗಿಂತಲೂ ಕಟ್ಟ ಹಿಂದುತ್ವ ಶಿವಸೇನೆಯದು. ಆದರೆ ಬಿಜೆಪಿಯದ್ದು ಎನ್ ಸಿಪಿಯೊಂದಿಗೆ ಮೈತ್ರಿ ನಡೆಯುತ್ತಿದೆ. ಈಗ ಮತ್ತೆ ಚುನಾವಣೆ ಬರಬಹುದು. ಹೀಗೆ ಮಾಡುವುದು ನೋಡಿ ಬೇಸರವಾಗುತ್ತಿದೆ. ಮಹಾರಾಷ್ಟ್ರದಲ್ಲಂತೂ ದಿನಕ್ಕೊಂದು ಘಟನೆಗಳು ನಡೆಯುತ್ತಿವೆ. ಇದನ್ನು ಒಟ್ಟಾರೆಯಾಗಿ ಹೇಳ್ತಾ ಇದ್ದೇನೆ, ರಾಜಕೀಯದಲ್ಲಿ ನೈತಿಕತೆ ಅಧಃ ಪತನ ವಾಗ್ತಾಯಿದೆ. ಕರ್ನಾಟಕದಲ್ಲಿಯಂತೆ ಮಹಾರಾಷ್ಟ್ರದ ರಾಜಕೀಯ ಕೂಡ ನಡೆಯುತ್ತಿದೆ.
ಯಾರಿಗೂ ಬಹುಮತ ಇಲ್ಲ ಅಂದ್ರೆ ಪುನಃ ಚುನಾವಣೆ ಮಾಡಿ ಇಲ್ಲ ಅಂದ್ರೆ ಸರ್ವ ಪಕ್ಷ ಸರಕಾರ ಮಾಡಿ. ಬಿಜೆಪಿಗೂ ಕೂಡ ರಾತ್ರಿ ಬೆಳಗಾಗುವುದರಲ್ಲಿ ಅಧಿಕಾರ ಸ್ವೀಕಾರ ಮಾಡಬೇಕಾಗಿರಲಿಲ್ಲ ಎಂದು ಅವರು ಟೀಕಿಸಿದ್ದಾರೆ. ಉಪಚುನಾವಣೆಯಲ್ಲಿ ಬಿಜೆಪಿಗೆ ಸಾಕಷ್ಟು ಸ್ಥಾನ ಬರದಿದ್ದಲ್ಲಿ ಮರಚುನಾವಣೆ ನಡೆಯಬೇಕು. ಜೆಡಿಎಸ್ ಸ್ವಲ್ಪ ಉದಾರ ಮನಸ್ಸು ಮಾಡಿದರೆ ಬೆಜೆಪಿಗೆ ಬೆಂಬಲ ಕೊಡಬಹುದು ಎಂದರು.
ಮುಸ್ಲಿಂ ಪರ್ಸನಲ್ ಲಾ ಬೋರ್ಡ್ರವರು ರಾಮಮಂದಿರದ ವಿಚಾರವಾಗಿ ಕೋರ್ಟ್ ಮೆಟ್ಟಿಲು ಹೋಗುವ ಪ್ರಶ್ನೆಗೆ ಉತ್ತರಿಸಿ, 'ಅದನ್ನು ಕೋರ್ಟ್ ಸ್ವೀಕರಿಸುವುದು ಸಂಶಯ. ಈಗಾಗಲೆ ಐದು ಜನ ನ್ಯಾಯಧೀಶರು ತೀರ್ಪು ಕೊಟ್ಟಾಗಿದೆ. ಸುಪ್ರೀಂ ಕೋರ್ಟ್ ಇದನ್ನು ಮತ್ತೆ ಸ್ವೀಕರಿಸಲಿಕ್ಕಿಲ್ಲ ಎನ್ನುವುದು ನನ್ನ ಭಾವನೆ' ಎಂದು ಪೇಜಾವರ ಶ್ರೀಗಳು ಪ್ರತಿಕ್ರಿಯೆ ನೀಡಿದ್ದಾರೆ.