ಕುಂದಾಪುರ, ನ 27 (DaijiworldNews/SM): ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ನೇರವಾಗಿ ವೀಕ್ಷಿಸಿ ನಡೆಯಬಹುದಾದ ಅಪರಾಧಗಳನ್ನು ತಡೆಯುವ ಸಿಸಿ ಟಿವಿ ಮಾನಿಟರ್ ಸೆಂಟರ್ ಸೇಫ್ ಕುಂದಾಪುರ ಯೋಜನೆ ಬುಧವಾರ ಅಂಕದಕಟ್ಟೆಯಲ್ಲಿ ಲೋಕಾರ್ಪಣೆಗೊಂಡಿತು.
ಯೋಜನೆಯನ್ನು ಉದ್ಘಾಟಿಸಿದ ಉಡುಪಿ ಜಿಲ್ಲಾ ಎಸ್ಪಿ ನಿಶಾ ಜೇಮ್ಸ್ ಮಾತನಾಡಿ, ಸೈನ್ ಇನ್ ಸೆಕ್ಯೂರಿಟಿ ಸಂಸ್ಥೆಯ ಮೂಲಕ್ ನಡೆಯುವ ಸಿಸಿಟಿವಿ ಕಣ್ಗಾವಲು ವ್ಯವಸ್ಥೆ ಸೇಫ್ ಕುಂದಾಪುರ ಯೋಜನೆಯು ಪೋಲೀಸ್ ಇಲಾಖೆಯ ಹಿಡಿತದಲ್ಲಿರುತ್ತದೆ.
ಸಿಸಿಟಿವಿ ಇದ್ದರೆ ಘಟನೆ ಕುರಿತು ಸುಳ್ಳು ಮಾಹಿತಿ ನೀಡಲು ಸಾಧ್ಯವಿಲ್ಲ. ಮುದ್ರಿತ ಚಿತ್ರಣ ಬದಲು ನೇರ ಚಿತ್ರಣ ವೀಕ್ಷಿಸಿ ಸಂಭಾವ್ಯ ಅನಾಹುತ ತಪ್ಪಿಸುವ ಯತ್ನ ಇದೆ. ಇದನ್ನು ಜಿಲ್ಲಾದ್ಯಂತ ವಿಸ್ತರಿಸಲಾಗುವುದು ಎಂದರು.
ಕುಂದಾಪುರ ಪೊಲೀಸ್ ಉಪವಿಭಾಗದ ಎಎಸ್ಪಿ ಹರಿರಾಮ್ ಶಂಕರ್ ಮಾತನಾಡಿ, ಕುಂದಾಪುರ ಜನರ ಬೆಂಬಲದಿಂದ ಇದು ಸಾಧ್ಯವಾಗುತ್ತಿದೆ. ಸಿಸಿಟಿವಿ ಇದ್ದರೂ ಅಪರಾಧಗಳು ಸಂಭವಿಸುತ್ತವೆ. ಆದರೆ ಘಟನೆಯ ನಂತರ ಅವು ತಿಳಿಯುತ್ತದೆ. ಆದರೆ ಪೂರಕವಾದ ಸಾಕ್ಷ್ಯಗಳು ಎಷ್ಟೋ ಬಾರಿ ದೊರೆಯುವುದಿಲ್ಲ. ಅದಕ್ಕಾಗಿ ಪೊಲೀಸ್ ವ್ಯವಸ್ಥೆಯಲ್ಲಿ ಆಧುನಿಕತೆಯನ್ನು ತರಲಾಗುತ್ತಿದೆ ಎಂದರು.
ಕೋಟೇಶ್ವರ ಕೋಟಿ ಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಾರ್ಕೋಡು ಗೋಪಾಲಕೃಷ್ಣ ಶೆಟ್ಟಿ , ಭದ್ರತೆ ಇಂದಿನ ಅತ್ಯಂತ ಮಹತ್ವದ ವಿಷಯ. ಇಂದಿನ ಸಾಮಾಜಿಕ ಯುಗದಲ್ಲಿ ಇದನ್ನು ಆದ್ಯತೆಯಾಗಿ ಪರಿಗಣಿಸಬೇಕು. ಕಾನೂನು ಉಲ್ಲಂಘನೆ ಮಾಡುವವರನ್ನು ಹತ್ತಿಕ್ಕಲು ಇದು ಪ್ರಾಥಮಿಕ ವ್ಯವಸ್ಥೆಯಾಗಿದೆ ಎಂದರು.