ಉಡುಪಿ, ನ 27 (Daijiworld News/MSP): ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಪರೀಕ್ಷೆ ವೇಳೆ ಸ್ಮಾರ್ಟ್ ಆಗಿ ನಕಲು ಮಾಡಲು ಹೋಗಿ ಸಿಕ್ಕಿಬಿದ್ದ ಘಟನೆ ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ನಡೆದಿದೆ. ವಿದ್ಯಾರ್ಥಿಯ ವಿವರ ಗೌಪ್ಯವಾಗಿಡಲಾಗಿದೆ.
ಸಿಕ್ಕಿಬಿದ್ದ ವಿದ್ಯಾರ್ಥಿ ಎಂಐಟಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದು ಸ್ಮಾರ್ಟ್ ವಾಚ್ ಕಟ್ಟಿಕೊಂಡು ಹೋಗಿ ಪರೀಕ್ಷೆಯಲ್ಲಿ ನಕಲು ಮಾಡಲು ಪ್ರಾರಂಭಿಸಿದ್ದಾನೆ. ಈತನ ಬಗ್ಗೆ ಸಂಶಯಗೊಂಡು ಪರೀಕ್ಷಾಧಿಕಾರಿ ಪರೀಕ್ಷಿಸಿದಾಗ ಸ್ಮಾರ್ಟ್ ವಾಚ್ ಕಟ್ಟಿ ನಕಲು ಮಾಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ತಕ್ಷಣ ಈತನನ್ನು ಪರೀಕ್ಷೆ ಹಾಲ್ ನಿಂದ ಎಬ್ಬಿಸಿ ಹೊರಗೆ ಕಳುಹಿಸಿದ್ದಾರೆ.
ಈತನ ಬಳಸಿದ್ದ ಸ್ಮಾರ್ಟ್ ವಾಚ್ ಅಡ್ವನ್ಸ್ ಆಗಿದ್ದು, ಪಠ್ಯವನ್ನೇ ಇದರೊಳಗೆ ಅಪ್ಲೋಡ್ ಮಾಡಬಹುದಾಗಿದೆ. ಸ್ಮಾರ್ಟ್ ವಾಚ್ ಪರೀಕ್ಷಿಸಿದಾದ ಪರೀಕ್ಷೆಗೆ ಸಂಬಂಧಪಟ್ಟ ಎಲ್ಲಾ ಪ್ರೋಗ್ರಾಂಗಳು, ಅದರ ಸೂತ್ರಗಳು, ದೊರಕಿದ್ದು ಇದನ್ನು ಝೂಮ್ ಮಾಡುವ ಆಪ್ಶನ್ ಕೂಡ ವಾಚ್ ನಲ್ಲಿದೆ. ಎಕ್ಸಾಂ ಹಾಲ್ನಲ್ಲಿ ಸಿಸಿಟಿವಿ ಅಳವಡಿಸಿದ್ದರೂ ವಿದ್ಯಾರ್ಥಿ ಅತೀ ಬುದ್ಧಿವಂತಿಕೆಯ ಪ್ರದರ್ಶನ ಮಾಡಲು ಹೋಗಿ ಇದೀಗ ಸಿಕ್ಕಿಬಿದ್ದಿದ್ದಾನೆ.