ಬಂಟ್ವಾಳ, ನ 25 (Daijiworld News/MSP): ಹಾಸನದಲ್ಲಿ ಕಾರಿಗೆ ಬಸ್ ಡಿಕ್ಕಿಯಾದ ಪರಿಣಾಮ ಬಸ್ ಪಲ್ಟಿಯಾಗಿ ಮೂಲತಃ ಮಾಣಿ ನಿವಾಸಿ ಚಂದಪ್ಪ ಮೂಲ್ಯ ಅವರ ಮೊಮ್ಮಗ, ಉಗ್ಗಪ್ಪ ಮೂಲ್ಯ ಅವರ ಮಗ ಅಭಿಷೇಕ್ (27) ಮೃತಪಟ್ಟಿದ್ದಾನೆ. ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಚನ್ನರಾಯಪಟ್ಟನದ ಹಿರಿಸಾವೆ ಎಂಬಲ್ಲಿ ಈ ದುರ್ಘಟನೆ ನಡೆದಿದೆ. ಬಸ್ ನಲ್ಲಿ 45 ಜನ ಪ್ರಯಾಣಿಕರಿದ್ದು, ಇದರಲ್ಲಿ 25 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ಭಾನುವಾರ ರಾತ್ರಿ ಮಾಣಿಯಿಂದ ಬಸ್ ಹತ್ತಿದ ಅಭಿಷೇಕ್ ಮುಂಜಾನೆಯ ವೇಳೆ ಬಸ್ ಪಲ್ಟಿಯಾಗಿ ಮೃತಪಟ್ಟಿದ್ದಾನೆ. ಅಭಿಷೇಕ್ ಅವರಿಗೆ ಬೆಂಗಳೂರಿನಲ್ಲಿನ ಖಾಸಗಿ ಬ್ಯಾಂಕ್ ನಲ್ಲಿ ಕೆಲಸ ಸಿಕ್ಕಿದ್ದು ಅವರು ಇಂದು ಕೆಲಸಕ್ಕೆ ಸೇರಬೇಕಾಗಿತ್ತು. ಇತ್ತೀಚೆಗೆ ಅವರ ಕುಟುಂಬ ಬೆಂಗಳೂರಿನಲ್ಲಿ ನೆಲೆಸಿತ್ತು.
ಅಭಿಷೇಕ್ ಹತ್ತಿರದ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆಂದು ಅವರ ಊರಿಗೆ ಬಂದಿದ್ದರು. ಮದುವೆ ಮುಗಿಸಿ ವಾಪಾಸು ಊರಿನಿಂದ ಬಸ್ ಮೂಲಕ ಬೆಂಗಳೂರಿಗೆ ತಮ್ಮನ ಜೊತೆಯಲ್ಲಿ ಪ್ರಯಾಣ ಬೆಳೆಸಿದ್ದರು. ಹಾಸನ ಸಮೀಪ ಬಸ್ ಪಲ್ಟಿಯಾಗಿ ಇವರು ಮೃತಪಟ್ಟಿದ್ದಾರೆ. ಅಭಿಷೇಕ್ ತಮ್ಮನಿಗೂ ಗಾಯಗಳಾಗಿದ್ದು , ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ಧಾರೆ. ಅಭಿಷೇಕ್ ಕಲ್ಲಡ್ಕ ಶ್ರೀ ರಾಮ ಕಲ್ಲಡ್ಕ ಶಾಲೆ ಹಳೆ ವಿದ್ಯಾರ್ಥಿಯಾಗಿದ್ದರು.