ಬೆಳ್ಮಣ್, ನ 24(DaijiworldNews/SM): ಕಾರ್ಕಳ ಪಡುಬಿದ್ರೆ ರಾಜ್ಯ ಹೆದ್ದಾರಿ 1ರಲ್ಲಿ ಬೆಳ್ಮಣ್ ಪೇಟೆಯಲ್ಲಿ ನಿರ್ಮಿಸಲು ಉದ್ದೇಶಿಸಿದ ಟೋಲ್ ಗೇಟ್ ಕೇಂದ್ರ ನಿರ್ಮಾಣಕ್ಕೆ ಇದೀಗ ಗುಟ್ಟಾಗಿ ಸರ್ವೆ ಕಾರ್ಯ ಕಳೆದ ಮೂರು ದಿನಗಳಿಂದ ಬೆಳ್ಮಣ್ ನಲ್ಲಿ ನಡೆಯುತ್ತಿದ್ದು ಭಾನುವಾರ ರಾತ್ರಿ ವೇಳೆ ಬೆಳಕಿಗೆ ಬಂದಿದ್ದು ಗ್ರಾಮಸ್ಥರು ಆಕ್ರೋಶಿತರಾಗಿದ್ದಾರೆ.
ಬೆಳ್ಮಣ್ ನಲ್ಲಿ ನಿರ್ಮಿಸಲು ಉದ್ದೇಶಿಸಿದ ಟೋಲ್ ಗೇಟ್ ನಿರ್ಮಾಣಕ್ಕೆ ಕಳೆದ ಎರಡು ಬಾರಿ ಸರ್ವೆಯನ್ನು ಗುಟ್ಟಾಗಿ ನಡೆಸಲು ಬಂದ ಖಾಸಗಿ ಕಂಪನಿಗಳು ವಿಫಲಗೊಂಡಿದ್ದು ಇದೀಗ ಮತ್ತೆ ಮೂರನೇ ಬಾರಿಯ ಸರ್ವೆ ಕಾರ್ಯವನ್ನು ನಡೆಸಲು ಬೆಳ್ಮಣ್ ನ ಖಾಸಗಿ ಹೋಟೆಲ್ ಒಂದರಲ್ಲಿ ರೂಮ್ ಮಾಡಿಕೊಂಡು ಕಳೆದ ಮೂರು ದಿನದಿಂದ ಸರ್ವೆಯನ್ನು ಗುಟ್ಟಾಗಿ ನಡೆಸುತ್ತಿದ್ದರು. ಈ ಸುದ್ದಿ ಗ್ರಾಮಸ್ಥರಿಗೆ ತಿಳಿಯುತ್ತಿದ್ದಂತೆ ಎಚ್ಚೆತ್ತ ಟೋಲ್ ಗೇಟ್ ಹೋರಾಟ ಸಮಿತಿ ಬರುವುದರೊಳಗೆ ಸರ್ವೆ ನಡೆಸುವ ಸಿಬ್ಬಂದಿಗಳು ಕಾಲ್ಕಿದ್ದಾರೆ.
ಲಾಡ್ಜ್ ನಲ್ಲಿ ಕುಳಿತು ಸರ್ವೆ:
ಕಳೆದ ಎರಡು ಬಾರಿ ರಸ್ತೆಯ ಬದಿಯಲ್ಲಿ ಕುಳಿತು ಸರ್ವೆಯನ್ನು ನಡೆಸುವ ವೇಳೆ ಗ್ರಾಮಸ್ಥರು ಹಾಗೂ ಹೋರಾಟ ಸಮಿತಿ ತಡೆದಿದ್ದು, ಇದೀಗ ಮತ್ತೆ ಮೂರನೇ ಬಾರಿ ರಸ್ತೆಯ ಬದಿಯಲ್ಲಿ ಕುಳಿತುಕೊಳ್ಳದೆ ಖಾಸಗಿ ಲಾಡ್ಜ್ವೊಂದರಲ್ಲಿ ರೂಮ್ ಪಡೆದು ಮೂರು ದಿನದಿಂದ ಕಿಟಾಕಿಯಿಂದ ರಸ್ತೆಯನ್ನು ವೀಕ್ಷಿಸಿ ವಾಹನಗಳ ಸಂಖ್ಯೆಯನ್ನು ಲೆಕ್ಕಹಾಕುತ್ತಿದ್ದರು. ಗುಟ್ಟಾಗಿ ರೂಮಲ್ಲಿ ಕುಳಿತು ಸರ್ವೆಯನ್ನು ನಡೆಸಿ ಬೆಳ್ಮಣ್ ನಲ್ಲಿ ಟೋಲ್ ನಿರ್ಮಾಣಕ್ಕೆ ಹೊಂಚು ಹಾಕುತ್ತಿದ್ದು ಕೂಡಲೇ ಎಚ್ಚೆತ ಹೋರಾಟ ಸಮಿತಿ ಮುತ್ತಿಗೆ ಹಾಕುವುದರೊಳಗೆ ಸರ್ವೆ ನಡೆಸುತ್ತಿದ್ದ ಸಿಬ್ಬಂದಿಗಳು ಕಾಲ್ಕಿತ್ತಿದ್ದಾರೆ.
ಉಗ್ರ ಹೋರಾಟಕ್ಕೂ ಸಿದ್ದ:
ಕಳೆದ ಒಂದು ವರ್ಷದ ಹಿಂದೆ ಸುಮಾರು 6 ಸಾವಿರಕ್ಕೂ ಮಿಕ್ಕ ಗ್ರಾಮಸ್ಥರು ಸೇರಿ ಟೋಲ್ ಗೇಟ್ ನಿರ್ಮಾಣದ ವಿರುದ್ದ ಹೋರಾಟವನ್ನು ನಡೆಸಿದ್ದರು ಆ ಬಳಿಕ ಸುದ್ದಿ ಇಲ್ಲದ ಟೋಲ್ ವಿಷಯ ಮತ್ತೆ ಸ್ವಲ್ಪ ಸಮಯದ ಬಳಿಕ ಸರ್ವೆಗೆ ಮುಂದಾಗಿ ವಿಫಲವಾಯಿತು ಇದೀಗ ಮತ್ತೆ ಸರ್ವೆಯನ್ನು ಗುಟ್ಟಾಗಿ ಹೋಟೇಲ್ ರೂಮ್ ನಲ್ಲಿ ಕುಳಿತು ನಡೆಸುತ್ತಿದ್ದು ಇದರ ವಿರುದ್ದ ಉಗ್ರವಾದ ಹೋರಾಟವನ್ನು ನಡೆಸುತ್ತೇವೆ ಎಂದು ಹೋರಾಟ ಸಮಿತಿ ಖಡಕ್ ಎಚ್ಚರಿಕೆಯನ್ನು ನೀಡಿದೆ. ಶಾಂತ ರೀತಿಯಾದ ಹೋರಾಟವನ್ನು ಮಾಡಿದರೂ ಸರ್ಕಾರದ ನಿಲುವು ಬದಲಾಗುವಂತೆ ಕಾಣುತ್ತಿಲ್ಲ ಈ ನಿಟ್ಟಿನಲ್ಲಿ ಮುಂದಿನ ದಿನದಲ್ಲಿ ಉಗ್ರ ರೀತಿಯ ಹೋರಾಟಕ್ಕೆ ಸಮಿತಿ ಸಜ್ಜಾಗಲಿದೆ ಎಂದು ಹೋರಾಟ ಸಮಿತಿಯ ಸುಹಾಸ್ ಹೆಗ್ಡೆ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಮೂರು ಬಾರಿಯೂ ವಿಫಲ :
ರಾಜ್ಯ ಹೆದ್ದಾರಿ 1 ರಲ್ಲಿ ಸುಂಕ ವಸೂಲಾತಿ ಕೇಂದ್ರ ನಿರ್ಮಿಸಿ ವಾಹನ ಸವಾರರಿಂದ ಸುಂಕವನ್ನು ಪಡೆಯುತ್ತೇವೆ ಎಂದು ಗುತ್ತಿಗೆ ಪಡೆದುಕೊಂಡ ಮೈಸೂರಿನ ಮಿತ್ರಾ ಇನ್ಪೋ ಸೊಲ್ಯೂಷನ್ ಸಂಸ್ಥೆ ಪ್ರಾಯಶಃ ಹಿಂದೆ ಸರಿದಿದ್ದು ಆ ಬಳಿಕ ಇನ್ನೊಂದು ಖಾಸಗಿ ಸಂಸ್ಥೆ ಕುಂದಾಪುರ ಮೂಲದ ಅಥರ್ವ ಎಜೆನ್ಸಿ ಮೂಲಕ ಸರ್ವೆ ಕಾರ್ಯಕ್ಕೆ ಇಳಿದಿತ್ತು. ಇದೀಗ ಮತ್ತೆ ಮೂರನೇ ಬಾರಿಯೂ ಸರ್ವೆಯನ್ನು ನಡೆಸಲು ಬಂದವರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಕಾಲ್ಕಿತ್ತಿದ್ದಾರೆ.