ಮಂಗಳೂರು, ನ 24(Daijiworld News/MB) : ಇಲ್ಲಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೇಷನ್ಸ್ ನ್ಯಾಯಾಲಯದಲ್ಲಿ ನವೆಂಬರ್ 22ರಂದು ಸೈನೆಡ್ ಮೋಹನ್ ನ 18 ನೇ ಪ್ರಕರಣ ಕಾಸರಗೋಡಿನ ಯುವತಿಯನ್ನು ಕರೆದೊಯ್ದು ಹತ್ಯೆ ಮಾಡಿದ್ದು ಸಾಬೀತಾಗಿದ್ದು, ಶಿಕ್ಷೆಯ ಪ್ರಮಾಣವನ್ನು ನವೆಂಬರ್ 26ರಂದು ನ್ಯಾಯಾಲಯ ಪ್ರಕಟಿಸಲಿದೆ.
ಮೋಹನ್ ಗೆ 2009ರ ಎಪ್ರಿಲ್ ತಿಂಗಳಲ್ಲಿ ಕಾಸರಗೋಡಿನ ಕುಂಬಳೆ ಬಸ್ ನಿಲ್ದಾಣದಲ್ಲಿ 28 ವರ್ಷ ಪ್ರಾಯದ ಬೀಡಿ ಕಾರ್ಮಿಕ ಯುವತಿಯ ಪರಿಚಯವಾಗಿದ್ದು, ಮೋಹನ್ ತನ್ನನ್ನು ಆನಂದ ಪೂಜಾರಿ ಎಂದು ಪರಿಚಯ ಮಾಡಿಕೊಂಡಿದ್ದಾನೆ. ಆಕೆಯನ್ನು 2009 ರ ಮೇ ತಿಂಗಳಲ್ಲಿ ಕುಶಾಲ ನಗರಕ್ಕೆ ಕರೆದೊಯ್ದಿದ್ದು ಅಲ್ಲಿನ ಲಾಡ್ಜ್ ನಲ್ಲಿ ರೂಂ ಮಾಡಿದ ಆತ ಆಕೆಯನ್ನು ವಿವಾಹವಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿದ್ದಾನೆ.
ಬಳಿಕ ಮರುದಿನ ಬೆಳಿಗ್ಗೆ ದೇವಸ್ಥಾನಕ್ಕೆ ಪೂಜೆಗೆಂದು ಹೇಳಿ ಹತ್ತಿರದ ಬಸ್ ನಿಲ್ದಾಣಕ್ಕೆ ಕರೆದೊಯ್ದು ಅಲ್ಲಿ ಗರ್ಭನಿರೋಧಕ ಮಾತ್ರೆ ಎಂದು ಹೇಳಿ ಸೈನೆಡ್ ನೀಡಿದ್ದು ಅದನ್ನು ಸೇವನೆ ಮಾಡಿದ ಯುವತಿ ಶೌಚಾಲಯದಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾಳೆ. ಬಳಿಕ ಲಾಡ್ಜ್ ಗೆ ತೆರಳಿದ್ದ ಮೋಹನ್ ಆಕೆಯ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದ.
ಯುವತಿಯು ತಾನು ಪೆರ್ಲದಲ್ಲಿರುವ ಅಜ್ಜಿಯ ಮನೆಗೆ ಹೋಗುವುದಾಗಿ ಹೇಳಿ ಮನೆಯಿಂದ ತೆರಳಿದ್ದು ಮೂರು ದಿನವಾದರೂ ಹಿಂದಿರುಗಿ ಬಾರದೇ ಫೋನಿನಲ್ಲಿ ಸಂಪರ್ಕಕ್ಕೂ ಸಿಗದ ಕಾರಣದಿಂದ ಮನೆ ಮಂದಿ ನಾಪತ್ತೆ ಕೇಸನ್ನು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದರು. ಮೋಹನ್ 2009ರಲ್ಲಿ ಬಂಧಿತನಾದ ನಂತರ ಈ ಪ್ರಕರಣ ಬೆಳಕಿಗೆ ಬಂದಿದ್ದು ಇದು ಅವನ 18 ನೆ ಪ್ರಕರಣವಾಗಿದೆ.
ಈ ಪ್ರಕರಣದಲ್ಲಿ ಸರಕಾರದ ಪಬ್ಲಿಕ್ ಪ್ರಾಸಿಕ್ಯೂಟರ್ ಜಯರಾಮ ಶೆಟ್ಟಿ ವಾದಿಸಿದ್ದಾರೆ.