ಕುಂದಾಪುರ, ನ 23 (Daijiworld News/MB) : ಕೇವಲ ತೋರಿಕೆಯ, ಆಡಂಬರದ ಬದುಕು ನಮ್ಮನ್ನು ನಾಗರೀಕತೆಯತ್ತ ಕೊಂಡೊಯ್ಯದು. ನಮ್ಮೊಳಗೆ ನಾವೇ ಗುರುತಿಸಿ ಬೆಳೆಸಿದ ಬೇಧಭಾವಗಳನ್ನು ನಾವೇ ಕಿತ್ತೊಗೆದು ಗಾಂಧೀಜಿ ಹಾಕಿಕೊಟ್ಟ ದಾರಿಯಲ್ಲಿ ನಡೆದಾಗ ಮಾತ್ರ ಸದೃಢ ಭಾರತದ ಕನಸು ನನಸಾಗಲು ಸಾಧ್ಯ ಎಂದು ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಹೇಳಿದರು.
ಅವರು ಕುಂದಾಪುರದ ಶನಿವಾರ ರೋಟರಿ ಕಲಾಮಂದಿರದಲ್ಲಿ ನಾಲ್ಕು ದಿನಗಳ ಕಾಲ ಹಮ್ಮಿಕೊಳ್ಳಲಾದ ಕಾರ್ಟೂನು ಹಬ್ಬ ಕಾರ್ಯಕ್ರಮವನ್ನು ಉದ್ಘಾಟನಾ ಕಾರ್ಯಕ್ರಮದಲ್ಲಿ ’ಗಾಂಧಿ - 150 ಈಶ್ವರ್ ಅಲ್ಲಾ ತೇರೇ ನಾಮ್’ ಎನ್ನುವ ವಿಚಾರದಲ್ಲಿ ದಿಕ್ಸೂಚಿ ಭಾಷಣ ಮಾಡಿ ಮಾತನಾಡಿದರು.
ನಮ್ಮ ದೇಶದಲ್ಲಿ ಇವತ್ತು ಮತೀಯ ಬೇಧ ಬಾವಗಳು ತಲೆಯೆತ್ತಿವೆ. ಬ್ರಿಟಿಷರಿಂದ ನಮಗೆ ಸ್ವಾತಂತ್ರ್ಯ ದೊರಕಿದಾಗಲೇ ನಾವು ಮತೀಯ ಭಾವನೆಯನ್ನು ನಮ್ಮೊಳಗೆ ಬೆಳೆಸಿಕೊಂಡಿದ್ದೇವೆ ಎನ್ನುವ ಅಂಶವನ್ನು ಒಪ್ಪಿಕೊಳ್ಳಲೇಬೇಕು. ಧಾರ್ಮಿಕ ನೆಲೆಗಟ್ಟಿನ ಆಧಾರದಲ್ಲಿಯೇ ಬ್ರಿಟಿಷರು ನಮಗೆ ಸ್ವತಂತ್ರ ದೇಶವನ್ನು ವಿಭಜನೆ ಮಾಡಿ ಶಾಶ್ವತವಾಗಿ ಅಂತ:ಕಲಹವನ್ನು ಸೃಷ್ಟಿಸಿಬಿಟ್ಟರು. ಹಿಂದೂ ಮುಸ್ಲಿಂ ಎನ್ನುವ ಭಾವನೆಯಲ್ಲಿಯೇ ದೇಶವನ್ನು ಭಾರತ ಹಾಗೂ ಪಾಕಿಸ್ತಾನ ಎಂದು ಯಾವಾಗ ವಿಭಜನೆಯಾಯಿತೋ ಆ ಸಂದರ್ಭದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಗಾಂಧೀಜಿ ಅದನ್ನು ವಿರೋಧಿಸಿ ಅಮರಣಾಂತ ಉಪವಾಸ ನಡೆಸಿದರು. ಸ್ವಾಂತ್ರ್ಯ ಸಂಗ್ರಾಮದಲ್ಲಿ ಸೌಹಾರ್ದಯುತವಾಗಿದ್ದ ಧಾರ್ಮಿಕ ಮುಖಂಡರು ಸ್ವಾತಂತ್ರ್ಯದ ತಕ್ಷಣವೇ ವಿಭಜನೆ ಮೂಲಕ ಕೋಮು ದ್ವೇಷ ಬಿತ್ತುವಂತಾಯಿತು. ಯುವ ಸಮಾಜ ಈ ಸತ್ಯವನ್ನು ಒಪ್ಪಿಕೊಳ್ಳಬೇಕು. ಜೊತೆಗೆ ಬದುಕು ಕಲಿಸಿದ ಪಾಠವನ್ನು ಅರಿತು ಗಾಂಧೀಜಿ ಹಾಕಿಕೊಟ್ಟ ದಾರಿಯಲ್ಲಿ ಸಾಗಿದಾಗ ಮಾತ್ರ ಸದೃಢ ಭಾರತದ ನಿರ್ಮಾಣ ಸಾಧ್ಯ ಎಂದು ಹೇಳಿದರು.
ನಾವೆಲ್ಲಾ ಸ್ವಲ್ಪ ಹಡಿ ಪಳ್ದಿ ಮಾಡುವರ್. ಯಾರ್ಯಾರೋ ಕಾಲೆಳುದ್ ಜಾಸ್ತಿ. ಹಾಂಗೈ ನಮ್ಮೂರಗ್ ಹೆಚ್ಚಿನ್ ಜನ ಕಾರ್ಟೂನಿಸ್ಟ್ ಆಪುಕ್ ಸಾಧ್ಯ ಐತ್. ಕಾರ್ಟೂನ್ ಕ್ಷೇತ್ರಕ್ಕೆ ನಮ್ಮೂರಿನ ಕೊಡುಗೆ ಅಪಾರ. ಕಾರ್ಟೂನಿಸ್ಟರ ಇಡೀ ಬಳಗವೇ ಕುಂದಾಪುರದಲ್ ಇತ್ತ್ ಅಂದೆಳಿ ಹೇಳುಕ್ ನಂಗಂತೂ ಹೆಮ್ಮೆ ಅನ್ನಿಸ್ತಿದೆ ಎಂದು ಕುಂದಾಪುರ ಕಾರ್ಟೂನ್ ಬಳಗ ಆಶ್ರಯದಲ್ಲಿ ಇಲ್ಲಿನ ಪದವಿಪೂರ್ವ ಕಾಲೇಜು ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ನಡೆದ ಕಾರ್ಟೂನ್ ಹಬ್ಬ ಉದ್ಘಾಟಿಸಿ ಖ್ಯಾತ ನಿದೇರ್ಶಕ ಹಾಗೂ ನಟ ರಿಷಬ್ ಶೆಟ್ಟಿ ಕುಂದಾಪುರ ಕನ್ನಡದಲ್ಲೇ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡ ಪರಿಯಿದು.
ನಾವು ಹೋದಲ್ಲೆಲ್ಲಾ ನಮ್ಮ ಭಾಷೆಯನ್ನು ಕೇಳಿ ರೇಗಿಸುವವರೆ ಹೆಚ್ಚು. ನಮ್ಮ ಮಾತಿನಿಂದಲೇ ನಾವು ಎಲ್ಲರನ್ನೂ ನಗಿಸುತ್ತೇವೆ. ಹಾಗೆಯೇ ಮೊನಚಾದ ರೇಖೆಯ ಮೂಲಕ ನಮ್ಮೂರಿನ ಕಾರ್ಟೂನಿಸ್ಟ್ ಸತೀಶ್ ಆಚಾರ್ಯ ಎಲ್ಲರನ್ನೂ ನಗಿಸುತ್ತಿದ್ದಾರೆ. ಸತೀಶ್ ಆಚಾರ್ಯ ಅವರು ರಚಿಸುವ ಕಾರ್ಟೂನುಗಳನ್ನು ಆಗಾಗೆ ನೋಡಿ ನಗುತ್ತಲೇ ಇರುತ್ತೇನೆ. ನಾವು ಬ್ರಿಟೀಷ್ ಶಿಕ್ಷಣ ಪದ್ದತಿಯನ್ನು ಅನುಸರಿಸಿಕೊಂಡು ಬಂದಿದ್ದೇವೆ. ಗುರುಕುಲ ಮಾದರಿ ಶಿಕ್ಷಣ ವ್ಯವಸ್ಥೆ ಮಕ್ಕಳು ಜೀವನ ಹೇಗೆ ಎನ್ನುವುದುನ್ನು ಕಲಿಯುತ್ತಿದ್ದರು. ಆದರೆ ಗುರುಕುಲ ಮಾದರಿ ಶಿಕ್ಷಣ ವ್ಯವಸ್ಥೆ ಇಂದು ಇಲ್ಲ. ಈ ವ್ಯವಸ್ಥೆ ಮತ್ತೆ ವಾಪಾಸಾದರೆ ಮಾತ್ರ ನಾವು ನಮ್ಮ ತನವನ್ನು ಉಳಿಸಿಕೊಳ್ಳಬಹುದು ಎಂದರು.
ಇದೇ ಸಂದರ್ಭ ಕನ್ನಡ ಮಾಧ್ಯಮ ಸರ್ಕಾರಿ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾ ನಿರ್ದೇಶಕ ರಿಷಬ್ ಶೆಟ್ಟಿ ಅವರನ್ನು ವಿದ್ಯಾರ್ಥಿಗಳೇ ವಿಶೇಷವಾಗಿ ಅಭಿನಂದಿಸಿದರು. ಕುಂದಾಪುರದ ಕನ್ನಡ ಮಾಧ್ಯಮ ನಾಲ್ಕು ಶಾಲೆ ಮಕ್ಕಳು ಬೆಳಗ್ಗೆಯೇ ತಮ್ಮ ಶಿಕ್ಷಕರ ಜೊತೆ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಬಂದು ಕಾರ್ಯಕ್ರಮದ ಮೆರಗು ಹೆಚ್ಚಿಸಿದರು. ಕಾರ್ಯಕ್ರಮ ಆರಂಭವಾದ ನಂತರ ರಿಷಬ್ ಶೆಟ್ಟಿ ಅಭಿನಂದನೆ ಅವಕಾಶ ಮಾಡಿಕೊಡಲಾಯಿತು.
ನಾಲ್ಕು ಶಾಲೆಗಳಿಂದ ಇಬ್ಬರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಆಗಮಿಸಿದ್ದು, ಒಬ್ಬ ವಿದ್ಯಾರ್ಥಿ ರಿಷಬ್ ಶೆಟ್ಟಿ ಅವರಿಗೆ ಗುಲಾಬಿ ಕೊಟ್ಟು ಅಭನಂದಿಸಿದರೆ, ಮತ್ತೊಬ್ಬ ವಿದ್ಯಾರ್ಥಿ ಶುಭಾಶಯ ಬರೆಯುವ ಮೂಲಕ ಅಭಿನಂದಿಸಿದರು. ಹಿರಿಯ ವ್ಯಂಗ್ಯ ಚಿತ್ರಗಾರರಾದ ವಿ.ಜಿ. ನರೇಂದ್ರ, ಸುರೇಂದ್ರ, ಪವರ್ಲಿಪ್ಟರ್ ವಿಶ್ವನಾಥ ಗಾಣಿಗ ಅವರನ್ನು ಸಮ್ಮಾನಿಸಲಾಯಿತು.
ಗಾಂಧಿ ಅಧ್ಯಯನ ಕೇಂದ್ರ ಮಣಿಪಾಲ ಇದರ ನಿರ್ದೇಶಕ ವರದೇಶ್ ಹಿರೇಗಂಗೆ, ಸಿನೆಮಾ ನಿರ್ಮಾಪಕ ಯಾಕುಬ್ ಖಾದರ್ ಗುಲ್ವಾಡಿ, ಕಾರ್ಟೂನು ಹಬ್ಬದ ರೂವಾರಿ ಸತೀಶ್ ಆಚಾರ್ಯ ಉಪಸ್ಥಿತರಿದ್ದರು.