ಮಂಗಳೂರು, ನ 23 (Daijiworld News/MSP): ಕಟೀಲು ಮೇಳದಿಂದ ಸ್ಟಾರ್ ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರನ್ನು ಕೈಬಿಡಲಾಗಿದೆ ಎಂಬ ವದಂತಿಗಳನ್ನು ಹರಿದಾಡುತ್ತಿರುವ ಬೆನ್ನಲ್ಲೇ ಪಟ್ಲರು, ಖಾಸಗಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿ, ಘಟನೆಯಿಂದ ಅಪಮಾನವಾಗಿದ್ದು, ಇದು ಕಲಾವಿದನ ಸಾವೇ ಸರಿ ಎಂದು ನೊಂದು ನುಡಿದ್ದಾರೆ.
" ನಾನು ಬದುಕಿರುವವರೆಗೆ ಕಟೀಲು ತಾಯಿಯ ಸೇವೆ ಮಾಡಬೇಕೆಂದು ಹಾತೊರೆಯುತ್ತಿದ್ದವನು. ನಾನು ಯಾವುದನ್ನೂ ಅಪೇಕ್ಷೆ ಪಟ್ಟವನಲ್ಲ, ಯಾವುದಕ್ಕೂ ಬೇಡಿಕೆ ಇಟ್ಟವನಲ್ಲ. ಯಕ್ಷಗಾನ ಮಾತ್ರವಲ್ಲ ಯಾವ ರಂಗದ ಕಲಾವಿದನಿಗೂ ಇಂತಹ ಅಪಮಾನ ಆಗಬಾರದು. ಇದು ಕಲಾವಿದನ ಸಾವು.. ಈ ಘಟನೆ ನಡೆದಿದ್ದು ದೇವಿಯ ಸಾನಿಧ್ಯವಿರುವ ಕಟೀಲು ರಥಬೀದಿಯಲ್ಲಿ. ಏನೇ ಸರಿ ತಪ್ಪುಗಳು ನಡೆದಿದ್ದರೂ, ಅದಕ್ಕೆ ಜಾಗವಿತ್ತು, ಸಮಯವಿತ್ತು. ಸಾರ್ವಜನಿಕ ಸಮ್ಮುಖದಲ್ಲಿ ಕಲಾಭಿಮಾನಿಗಳ ಮುಂದೆ, ರಂಗದಲ್ಲಿ ಕುಳಿತ ನಂತರ ಕಲಾವಿದನಾಗಿರಲಿ ಅಥವಾ ಯಜಮಾನನೇ ಆಗಿರಲಿ ಆತನನ್ನು ಎಬ್ಬಿಸಿ ಕಳುಹಿಸಬಾರದು" ಎಂದು ಹೇಳಿದ್ದಾರೆ.
ಮುಂದುವರಿಸಿ ಮಾತನಾಡಿದ ಅವರು " ಕಟೀಲು ಶ್ರೀ ದುರ್ಗಾಪರಮೇಶ್ವರಿ ಮೇಳದ ಗೆಜ್ಜೆ ಮುಹೂರ್ತ ಶ್ರೀಕ್ಷೇತ್ರದಲ್ಲಿ ಶುಕ್ರವಾರ ಸಂಜೆ ವೈಭವದಿಂದ ನಡೆದಿದ್ದು, 2019-20ನೇ ಸಾಲಿನ ತಿರುಗಾಟಕ್ಕೆ ಚಾಲನೆ ದೊರೆಯುವ ವೇಳೆಯೂ ನಾನು ಭಾಗವಹಿಸಿದ್ದೆ. ಈ ಸಂದರ್ಭದಲ್ಲೂ ರಂಗಸ್ಥಳಕ್ಕೆ ಹೋಗಬೇಡಿ ಎನ್ನುವ ಯಾವ ಮುನ್ನೂಚನೆಯೂ ನೀಡಲಿಲ್ಲ. ಆದರೆ ರಂಗಕ್ಕೆ ಪ್ರವೇಶಿಸಿದ ಬಳಿಕ ಈ ರೀತಿ ಅಪಮಾನವಾಗಿದೆ. ನಾನು ಆಡಳಿತ ಮಂಡಳಿಯ ವಿರುದ್ದ ಯಾವುದೇ ಕಾರಣಕ್ಕೂ ಚಾಕರಾರು ಎತ್ತಿದವನಲ್ಲ. ಆದರೆ ಕಟೀಲು ತಾಯಿಯ ಸೇವೆಯಲ್ಲಿ ನಡೆಯುವ ಮೇಳ ಯಾರೊಬ್ಬರ ಸೊತ್ತಲ್ಲ, ನಾನು ೨೦ ವರ್ಷದಿಂದ ಕಟೀಲು ತಾಯಿಯ ಸೇವೆಯಲ್ಲಿ ದುಡಿಯುತ್ತಿದ್ದೇನೆ. ನನಗೆ ಬೇರೆ ಬೇರೆ ಮೇಳಗಳಿಂದ ಆಫರ್ ಬಂದರೂ ಕಟೀಲು ಸೇವೆಯ ಮುಖ್ಯವಾಗಿರುವುದರಿಂದ ಬೇರೆ ಯಾವುದನ್ನೂ ಬಯಸಿರಲಿಲ್ಲ. ಆ ತಾಯಿಯ ಮಗ ನಾನು. ಹೀಗಾಗಿ ನನ್ನನು ಆ ತಾಯಿಯೇ ಮತ್ತೆ ತನ್ನ ಸೇವೆಗೆ ವಾಪಾಸ್ ಕರೆಯಿಸಿಕೊಳ್ಳುತ್ತಾಳೆ ಎಂದು ನಂಬಿದ್ದೇನೆ.. ಅಲ್ಲಿಂದ ವಾಪಾಸ್ ಆಗುವ ವೇಳೆ ತಾಯಿಯ ಕಾಲಬುಡದಲ್ಲಿ ಪೇಟ ಸಮರ್ಪಿಸಿ ಬಂದಿದ್ದೇನೆ" ಎಂದಿದ್ದಾರೆ.
ಏನಾಗಿತ್ತು?
ಕಟೀಲು ಯಕ್ಷಗಾನ ಮೇಳಗಳ ಈ ಋತುವಿನ ತಿರುಗಾಟದ ಮೊದಲ ಯಕ್ಷಗಾನವನ್ನು ಪದ್ದತಿಯಂತೆ ಶುಕ್ರವಾರ ಕಟೀಲು ದೇವಸ್ಥಾನ ರಥಬೀದಿಯಲ್ಲಿ ಆಯೋಜಿಸಲಾಗಿತ್ತು. ಯಕ್ಷಗಾನದ ನಡೆಯುತ್ತಿದ್ದ ಸಮಯದಲ್ಲಿ ಭಾಗವತಿಕೆ ನಡೆಸಲು ಬಂದ ಪಟ್ಲ ಸತೀಶ್ ಶೆಟ್ಟಿಯವರನ್ನು ಎಬ್ಬಿಸಿ ಕಳುಹಿಸಲಾಗಿತ್ತು. ಇದೆಲ್ಲವೂ ವಿಡಿಯೋದಲ್ಲಿ ಸೆರೆಯಾಗಿ ಭಾರೀ ಚರ್ಚೆಗೀಡಾಗಿತ್ತು.
ಮಂಗಳೂರು: ವೇದಿಕೆಯಲ್ಲಿ ಭಾಗವತಿಕೆಗೆ ಅವಕಾಶ ನಿರಾಕರಣೆ - ಕಟೀಲು ಮೇಳದಿಂದ ಪಟ್ಲ ಸತೀಶ್ ಶೆಟ್ಟಿ ಹೊರಕ್ಕೆ.!?