Karavali
ಮಂಗಳೂರು: 'ಕ್ರೈಸ್ತ ಸಮುದಾಯ ಒಂದು ರಾಜಕೀಯ ಪಕ್ಷಕ್ಕೆ ಸೀಮಿತವಲ್ಲ'- ಪ್ರಮುಖ ಕ್ರೈಸ್ತ ಮುಖಂಡರು
- Sat, Nov 23 2019 02:28:36 PM
-
ಮಂಗಳೂರು, ನ 23 (Daijiworld News/MSP): ನಗರದಲ್ಲಿ ನ.23 ರಂದು ಪತ್ರಿಕಾಗೋಷ್ಠಿ ಆಯೋಜಿಸಿ ಮಾತನಾಡಿದ ಪ್ರಮುಖ ಕ್ರಿಶ್ಚಿಯನ್ ಸಮುದಾಯದ ಮುಖಂಡರು, ರಾಜಕಾರಣಿಗಳು ಕ್ರಿಶ್ಚಿಯನ್ ಸಮುದಾಯದ ಮೇಲೆ ತಮ್ಮ ಆಕಾಂಕ್ಷೆ ಮತ್ತು ಒತ್ತಡಗಳನ್ನು ರವಾನಿಸುವುದರ ವಿರುದ್ಧ ತೀವ್ರ ಖಂಡನೆ ವ್ಯಕ್ತಪಡಿಸಿದರು. ಕ್ರೈಸ್ತ ಮತ ಒಂದೇ ಪಕ್ಷಕ್ಕೆ ಮೀಸಲಿಟ್ಟಿರುವಂತೆ ರಾಜಕೀಯ ನಾಯಕರು ನೀಡಿದ ಹೇಳಿಕೆ ಹಾಗೂ ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಮತ ಚಲಾಯಿಸದ ಕಾರಣ ಅಥವಾ ಕ್ರೈಸ್ತ ಸಮುದಾಯದ ಸ್ವತಂತ್ರ ಅಭ್ಯರ್ಥಿಗಳಿಂದ ನಿರ್ದಿಷ್ಟವಾದ ಕೆಲವು ರಾಜಕೀಯ ಪಕ್ಷಗಳಿಗೆ ಸೋಲಾಗಿದೆ ಎನ್ನುವ ಹೇಳಿಕೆಗಳಿಂದ ಸಮುದಾಯಕ್ಕೆ ತೀವ್ರ ಬೇಸರವಾಗಿದೆ ಎಂದು ಒಕ್ಕೊರಲಿನಿಂದ ಅಭಿಪ್ರಾಯ ವ್ಯಕ್ತಪಡಿಸಿದರು.
ಕ್ರೈಸ್ತ ಸಮುದಾಯವು ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಒಂದು ಶಿಕ್ಷಿತ ಹಾಗೂ ಶಿಸ್ತಿನ ಸಮಾಜವಾಗಿದೆ. ಎಲ್ಲಾ ಧರ್ಮದವರ ಜೊತೆ ಬೆರೆತು, ಎಲ್ಲರ ಒಳಿತನ್ನು ಬಯಸುವ, ಸೌಹಾರ್ಧ ಬಾಳ್ವೆಯ ಹಾಗೂ ಶಾಂತಿಪ್ರಿಯ ಸಮುದಾಯವಾಗಿದೆ. ನಮ್ಮ ಸಮಾಜದ ಹಲವಾರು ರಾಜಕೀಯ ನಾಯಕರು ದೇಶದ ಅಭಿವೃದ್ಧಿಗೆ ಅಪಾರವಾದ ಕೊಡುಗೆ ನೀಡಿರುತ್ತಾರೆ. ಆ ಪೈಕಿ ಜೆ. ಎಂ. ಲೋಬೊ ಪ್ರಭು, ಜಾರ್ಜ್ ಫೆರ್ನಾಂಡಿಸ್, ಆಸ್ಕರ್ ಫೆರ್ನಾಂಡಿಸ್, ಇವಾ ವಾಜ್, ಜೆ.ಎಚ್. ರೋಡ್ರಿಗಸ್, ಮಾರ್ಗರೇಟ್ ಆಳ್ವ, ಒಕ್ಟೋವಿಯ ಆಲ್ಬುಕರ್ಕ್, ವಿನ್ನಿಫ್ರೆಡ್ ಫೆರ್ನಾಂಡಿಸ್, ಪಿ. ಎಮ್. ಕ್ಯಾಸ್ಟೆಲಿನೊ, ಬ್ಲೇಸಿಯಸ್ ಡಿಸೋಜಾ ಹೀಗೆ ಇನ್ನೂ ಹಲವಾರು ಮಂದಿ ರಾಜಕೀಯ ಸೇವೆ ನೀಡಿ, ಉತ್ತಮ ಹೆಸರನ್ನು ಗಳಿಸಿದ್ದಾರೆ. ಪ್ರಸ್ತುತ ಜೆ. ಆರ್. ಲೋಬೋ, ಐವನ್ ಡಿಸೋಜಾ ರಾಜಕೀಯ ಕ್ಷೇತದಲ್ಲಿ ತಮ್ಮ ಸೇವೆಯನ್ನು ನೀಡುತ್ತಿದ್ದಾರೆ. ಇತರ ಕ್ಷೇತ್ರಗಳಲ್ಲೂ ಕೂಡಾ ತನ್ನ ಸೇವೆಯನ್ನು ಕ್ರೈಸ್ತ ಸಮುದಾಯ ನಿರಂತರವಾಗಿ ನೀಡುತ್ತಿದೆ.
ಕೆಲವು ದಿನಗಳ ಹಿಂದೆ ಪತ್ರಿಕೆ ಹಾಗೂ ಸುದ್ಧಿ ಮಾದ್ಯಮಗಳಲ್ಲಿ ಕೆಲವು ರಾಜಕೀಯ ವ್ಯಕ್ತಿಗಳು ಮತ್ತು ಆ ಪಕ್ಷದ ನಾಯಕರು, ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕ್ರೈಸ್ತರು ನಿರ್ದಿಷ್ಟ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೆ ಮತ ಹಾಕಲಿಲ್ಲ. ಕ್ರೈಸ್ತರು ಸ್ವತಂತ್ರ ಅಭ್ಯರ್ಥಿಗಳಾಗಿ ಕಣದಲ್ಲಿದ್ದ ಕಾರಣ ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ತೊಂದರೆಯಾಗಿದೆ, ಇತ್ಯಾದಿ ಇಲ್ಲಸಲ್ಲದ ಆರೋಪಗಳನ್ನು ಮಾಡಿರುವುದನ್ನು ಕೇಳಿ ನಮಗೆ ಬೇಸರ ಹಾಗೂ ಆಶ್ಚರ್ಯ ಆಗಿದೆ. ಈ ಕುರಿತು ಮಾಧ್ಯಮದ ಮುಖಾಂತರ ನಮ್ಮ ಅಭಿಪ್ರಾಯವನ್ನು ಜನರ ಮುಂದೆ ಇಡಲು ಇಚ್ಛಿಸುತ್ತೇವೆ. ಇತ್ತೀಚೆಗೆ, ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆ ಸಂದರ್ಭದಲ್ಲಿ, ಕೆಲವು ರಾಜಕೀಯ ಮುಖಂಡರು, ಕ್ರೈಸ್ತ ಸಮುದಾಯದ ಮತಗಳು ನಿರ್ದಿಷ್ಟವಾದ ಒಂದೇ ರಾಜಕೀಯ ಪಕ್ಷಕ್ಕೆ ಬರಬೇಕು, ಕ್ರೈಸ್ತ ಸಮುದಾಯಕ್ಕೆ ಸೇರಿದ ಸ್ವತಂತ್ರ ಅಭ್ಯರ್ಥಿಗಳಿಂದ ನಿರ್ದಿಷ್ಟವಾದ ಕೆಲವು ರಾಜಕೀಯ ಪಕ್ಷಗಳಿಗೆ ತೊಂದರೆಯಾಗಿದೆ. ಕ್ರೈಸ್ತ ಸಮುದಾಯದ ಅಭ್ಯರ್ಥಿಗಳು ಸ್ವತಂತ್ರವಾಗಿ ಸ್ಪರ್ಧಿಸುವುದೇ ಒಂದು ದೊಡ್ಡ ಅಪರಾಧ ಎನ್ನುವ ರೀತಿಯಲ್ಲಿ ಮಾತನಾಡಿರುವುದು ಪತ್ರಿಕೆಗಳಲ್ಲಿ ಕಂಡು ನಮಗೆ ಬಹಳ ಬೇಸರ ತಂದಿದೆ. ರಾಜಕೀಯ ಮುಖಂಡರ ಈ ರೀತಿಯ ಮನೋಭಾವನೆಯನ್ನು ನಾವು ಸಂಪೂರ್ಣವಾಗಿ ಖಂಡಿಸುತ್ತೇವೆ. ಕ್ರೈಸ್ತ ಮತ ಒಂದೇ ಪಕ್ಷಕ್ಕೆ ಮೀಸಲಿಟ್ಟಿದ್ದೇವೆಯೇ? ಚುನಾವಣೆ ಅಂದ ಮೇಲೆ, ಅರ್ಹತೆ ಇದ್ದ ಯಾವನೇ ವ್ಯಕ್ತಿ, ಯಾವುದೇ ರಾಜಕೀಯ ಪಕ್ಷದ ಮುಖಾಂತರ ಯಾ ಸ್ವತಂತ್ರವಾಗಿ ಸ್ಪರ್ಧಿಸಲು ಸಂಪೂರ್ಣವಾಗಿ ಹಕ್ಕುಳ್ಳವನು. ಇದಕ್ಕೆ ಜಾತಿ-ಮತ-ಧರ್ಮದ ಲೇಪನ ಇರುವುದಿಲ್ಲ.
ಕೆಲವೊಂದು ರಾಜಕೀಯ ಮುಖಂಡರು ತಮ್ಮ ಸೋಲಿಗೆ ಕ್ರೈಸ್ತ ಸಮುದಾಯದ ನಾಯಕರ ಮೇಲೆ ಇಲ್ಲಸಲ್ಲದ ಆರೋಪವನ್ನು ಹೊರಿಸಿರುವುದು ಯಾವ ನ್ಯಾಯ? ಇಂತಹ ಮನೋಭಾವನೆ ಇರುವ ರಾಜಕೀಯ ನಾಯಕರಿಗೆ ನಾವು ಪ್ರಶ್ನೆ ಮಾಡಲೇಬೇಕಾಗಿದೆ. ಇತರ ಸಮಾಜದ ಸ್ವತಂತ್ರ ಅಭ್ಯರ್ಥಿಗಳು ಸ್ಪರ್ಧಿಸಿದಾಗ ಅಥವಾ ಯಾವುದೇ ಪಕ್ಷವನ್ನು ಬೆಂಬಲಿಸಿದಾಗ ಅವರನ್ನು ಪ್ರಶ್ನಿಸಲು ನಿಮ್ಮಿಂದ ಸಾಧ್ಯವಾಗಲಿಲ್ಲವೇ? ಆಯಾಯ ಸಮುದಾಯದ ನಾಯಕರು ಅವರ ಸಮುದಾಯದ ಸ್ವತಂತ್ರ ಅಭ್ಯರ್ಥಿಗಳನ್ನು ಹಿಂತೆಗೆಯುವುದಕ್ಕೆ ಯಾಕೆ ಪ್ರಯತ್ನಿಸಲಿಲ್ಲ, ಯಾಕೆ ಯಶಸ್ವಿಯಾಗಿಲ್ಲ? ಪರಸ್ಪರ ಚುನಾವಣಾ ಕಣದಲ್ಲಿರುವಾಗ ಆ ಅಭ್ಯರ್ಥಿಗಳ ನಾಮಪತ್ರವನ್ನು ಹಿಂತೆಗೆಯಲು ನೀವು ಯಾಕೆ ಪ್ರಯತ್ನಿಸಲಿಲ್ಲ? ಪ್ರಸ್ತುತ ಹಲವಾರು ಪಕ್ಷಗಳಲ್ಲಿ ನಮ್ಮ ಸಮುದಾಯದ ಮುಖಂಡರು ಗುರುತಿಸಿಕೊಂಡಿದ್ದು, ಇತ್ತೀಚಿನ ವರ್ಷಗಳಲ್ಲಿ ಮತದಾನದ ಬಗ್ಗೆ ನಡೆಯುತ್ತಿರುವ ಜಾಗೃತಿ ಕಾರ್ಯಕ್ರಮಗಳಿಂದ ನಮ್ಮ ಸಮುದಾಯದ ಸುಮಾರು 90% ಜನ ಮತದಾನದಲ್ಲಿ ಭಾಗವಹಿಸುತ್ತಾರೆ. ಕ್ರೈಸ್ತ ಸಮುದಾಯದವರ ಮತಗಳು ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವಾಗಿದೆಯೆಂದು ನೀವು ಹೇಳಿರುವುದು ಸತ್ಯ.
ಇಂದಿನ ರಾಜಕೀಯದಲ್ಲಿ ಗಂಡ, ಹೆಂಡತಿ, ಮಕ್ಕಳು ಪತ್ಯೇಕ ಪಕ್ಷದಲ್ಲಿ ಗುರುತಿಸಿಕೊಂಡಿರುವ ದಾಖಲೆಗಳು ಸಾಕಷ್ಟಿವೆ. ಇಂತಹ ಸಮಯದಲ್ಲಿ ಒಂದೇ ಪಕ್ಷವನ್ನು ಬೆಂಬಲಿಸಬೇಕೆಂಬ ಮಾತು ಸಮಂಜಸವೇ? ಇತರ ಸಮುದಾಯದವರು ಸ್ವತಂತ ಅಭ್ಯರ್ಥಿಗಳಾಗಿ ಸ್ಪರ್ಧಿಸಬಹುದಾದರೆ, ಕ್ರೈಸ್ತ ಸಮುದಾಯದವರು ಸ್ವತಂತ್ರವಾಗಿ ಯಾಕೆ ಸ್ಪರ್ಧಿಸಬಾರದು? ಇಂದಿನ ದಿನಗಳಲ್ಲಿ, ಯಾವುದೇ ಸಮುದಾಯದ ಮತಗಳು ಒಂದೇ ಪಕ್ಷಕ್ಕೆ ನಿಶ್ಚಿತವಾಗಿ ಸೀಮಿತವಾಗಿರುವುದಿಲ್ಲವೆಂದು ತಿಳಿಯಬೇಕಾದ ಕಟು ಸತ್ಯ. ಉತ್ತಮ ಅಭ್ಯರ್ಥಿಗಳು ಸ್ಪರ್ಧಿಸಿದರೆ ಆ ಅಭ್ಯರ್ಥಿಯನ್ನು ಪಕ್ಷಗಳ ಎಲ್ಲೆ ಮೀರಿ ಕ್ರೈಸ್ತರು ಬೆಂಬಲಿಸುತ್ತಾರೆ. ಈ ಪರಿಸ್ಥಿತಿಯಲ್ಲಿ ಸ್ವತಂತ್ರ ಅಭ್ಯರ್ಥಿಗೆ ನಮ್ಮ ಪಕ್ಷದ ಒಬ್ಬ ನಾಯಕ ಬೆಂಬಲ ನೀಡಿದ್ದಾರೆ ಅವರು ಸ್ವತಂತ್ರ ಅಭ್ಯರ್ಥಿಗಳನ್ನು ವಾಪಸು ತೆಗೆಯಲಿಲ್ಲ, ಕ್ರೈಸ್ತ ಸಮುದಾಯದ ಮತಗಳು ನಮ್ಮ ಪಕ್ಷಕ್ಕೆ ಹಕ್ಕಿನಿಂದ ಬರತಕ್ಕದ್ದು ಎಂಬಿತ್ಯಾದಿ ಮಾತುಗಳನ್ನು ಕ್ರೈಸ್ತ ಸಮುದಾಯ ಸಹಿಸುವುದಿಲ್ಲ. ಯಾರ್ಯಾರಿಗೆ ಮತ ಚಲಾಯಿಸಬೇಕು ಯಾವ ಅಭ್ಯರ್ಥಿಗಳನ್ನು ಬೆಂಬಲಿಸಬೇಕು ಎಂಬುವುದು ಅವರವರ ಸಂವಿಧಾನಿಕ ಹಕ್ಕು, ರಾಜಕೀಯ ನಾಯಕರು, ಕ್ರೈಸ್ತ ಸಮುದಾಯದವರೇ ನಿರ್ಧಿಷ್ಟ ಅಭ್ಯರ್ಥಿಯ ಸೋಲಿಗೆ ಕಾರಣ ಎಂಬ ಮಾತುಗಳು ಮುಂದಿನ ದಿನಗಳಲ್ಲಿ ಯಾವ ರಾಜಕೀಯ ನಾಯಕರ ಹೇಳಿಕೆ ನೀಡಬಾರದು ಹೇಳಲು ನಾವು ಇಚ್ಚಿಸುತ್ತೇವೆ.
ಕ್ರೈಸ್ತ ಸಮುದಾಯವು ಕೇವಲ ದ.ಕ. ಹಾಗೂ ಉಡುಪಿ ಜಿಲ್ಲೆಗೆ ಮಾತ್ರ ಸೀಮಿತವಾಗಿಲ್ಲ. ಇಡೀ ಕರ್ನಾಟಕ ರಾಜ್ಯ ಹಾಗೂ ದೇಶದಲ್ಲಿ ಇದೆ. ನಾವು ನಮ್ಮ ರಾಜಕೀಯ ಪ್ರಭುತ್ವವನ್ನು ಹಾಗೂ ಸಾಮರ್ಥ್ಯವನ್ನು ಇಡೀ ರಾಜ್ಯದಲ್ಲಿ ಎಲ್ಲೆಲ್ಲಾ ಕ್ರೈಸ್ತ ಸಮುದಾಯ ಇದೆ ಅಲ್ಲಲ್ಲಿ ರಾಜಕೀಯ ಜಾಗೃತಿಯನ್ನು ಮೂಡಿಸುವ ವ್ಯವಸ್ಥಿತ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದೇವೆ. ಆದುದರಿಂದ ಯಾವುದೇ ರಾಜಕೀಯ ನಾಯಕರು ಕ್ರೈಸ್ತ ಸಮುದಾಯದ ಮೇಲೆ ಗೂಬೆ ಕೂರಿಸುವ ಪ್ರಯತ್ನವನ್ನು ಮಾಡಬಾರದಾಗಿ ಮಾಧ್ಯಮದ ಮೂಲಕ ಹೇಳಬಯಸುತ್ತೇವೆ ಎಂದರು.
ಈ ಸಂದರ್ಭ ಮಂಗಳೂರು ಪ್ರದೇಶ ಕಥೋಲಿಕ್ ಸಭಾ ಅಧ್ಯಕ್ಷ ಪೌಲ್ ರೋಲ್ಫಿ ಡಿಕೋಸ್ತಾ, ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಎಂ.ಪಿ ನೊರೊನ್ಹಾ, ಕಥೋಲಿಕ್ ಚೆಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀ ಯ ಅಧ್ಯಕ್ಷ ಎಲಿಯಾಸ್ ಸಾಂಗ್ತಿಸ್ ,ಆಲ್ ಇಂಡಿಯಾ ಕ್ರಿಶ್ಚಿಯನ್ ಯೂನಿಯನ್ ನ ಅಧ್ಯಕ್ಷ ಲ್ಯಾನ್ಸಿ ಡಿಕುನ್ಹ, ಕರಾವಳಿ ಕೊಂಕಣ್ಸ್ ಲೆಸ್ಲಿ ರೆಗೋ ಉಪಸ್ಥಿತರಿದ್ದರು.