ಬೆಳ್ತಂಗಡಿ, ನ 22 (DaijiworldNews/SM): ಧರ್ಮಸ್ಥಳದಲ್ಲಿ ಅನ್ನದಾನ, ಔಷಧಿದಾನ, ವಿದ್ಯಾದಾನ ಮತ್ತು ಅಭಯದಾನ ಎಂಬ ಚತುರ್ವಿಧ ದಾನಗಳು ನಿತ್ಯೋತ್ಸವವಾಗಿವೆ. ನೊಂದು ಬಂದವರಿಗೆ ಸಾಂತ್ವನ ಹೇಳಿ ಧೈರ್ಯ ಮತ್ತು ಆತ್ಮವಿಶ್ವಾಸ ಮೂಡಿಸುವ ಅಭಯದಾನ ಅತ್ಯಂತ ಶ್ರೇಷ್ಠ ಹಾಗೂ ವಿಶಿಷ್ಠ ದಾನವಾಗಿದೆ. ಶ್ರೀ ಮಂಜುನಾಥ ಸ್ವಾಮಿ ಧರ್ಮಾಧಿಕಾರಿಗಳಾದ ಹೆಗ್ಗಡೆಯವರಿಗೆ ನೀಡಿದ ವಿಶೇಷ ಅನುಗ್ರಹ ಇದಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಶುಕ್ರವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾ ಭವನದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ಉಜಿರೆಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ಬಂದ ಹತ್ತು ಸಾವಿರಕ್ಕೂ ಮಿಕ್ಕಿ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು.
ವ್ಯವಹಾರದಲ್ಲಿ ನಷ್ಟ, ಶಾಪ ದೋಷ, ವಾಕ್ದೋಷ, ಕೌಟುಂಬಿಕ ಕಲಹ, ವ್ಯಾಪಾರದಲ್ಲಿ ಸೋಲು, ಮನಸ್ತಾಪ, ಇತ್ಯಾದಿಗಳಿಂದ ನೊಂದವರು ಧರ್ಮಸ್ಥಳಕ್ಕೆ ಬಂದು ಹೆಗ್ಗಡೆಯವರಲ್ಲಿ ನಿವೇದನೆ ಮಾಡಿಕೊಂಡಾಗ, ಶ್ರೀ ಸ್ವಾಮಿಗೆ ಶರಣಾಗಿ, ಹೆದರಬೇಡಿ, ಧೈರ್ಯವಾಗಿರಿ ಎಂದು ಅವರಿಗೆ ಸಾಂತ್ವನ ಹೇಳಿ ಹೆಗ್ಗಡೆಯವರು ಅಭಯ ನೀಡುತ್ತಾರೆ. ಜನರಿಗೆ ಬದುಕು ಕಟ್ಟಿಕೊಳ್ಳಲು ಪ್ರೇರಣೆ, ಮಾರ್ಗದರ್ಶನ ನೀಡುತ್ತಾರೆ. ಇದು ಹೆಗ್ಗಡೆ ಪೀಠಕ್ಕೆ ಶ್ರೀ ಮಂಜುನಾಥ ಸ್ವಾಮಿ ನೀಡಿದ ವಿಶೇಷ ಅನುಗ್ರಹವಾಗಿದೆ ಎಂದು ಅವರು ಹೇಳಿದರು.
ನಿರಂತರ ಪರಿವರ್ತನಾಶೀಲವಾದ ಜಗತ್ತಿನಲ್ಲಿ ನಾವು ಸಂದರ್ಭಕ್ಕೆ ಹಾಗೂ ಕಾಲಕ್ಕೆ ಸರಿಯಾಗಿ ಹೊಂದಿಕೊಂಡು ಆದರ್ಶ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು. ಹೊಗಳಿಕೆಗೆ ಹಿಗ್ಗಬೇಡಿ, ತೆಗಳಿಕೆಗೆ ಕುಗ್ಗಬೇಡಿ. ಎಲ್ಲವನ್ನೂ ಆತ್ಮವಿಶ್ವಾಸದಿಂದ ಮತ್ತು ಸಮಚಿತ್ತದಿಂದ ಸ್ವೀಕರಿಸಿ ಆದರ್ಶ ಜೀವನ ನಡೆಸಿ ಎಂದು ಸಲಹೆ ನೀಡಿದ ಹೆಗ್ಗಡೆಯವರು ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹದಿಂದ ಮತ್ತು ಜನರ ಪ್ರೀತಿ - ವಿಶ್ವಾಸದಿಂದ ಇನ್ನಷ್ಟು ಹೆಚ್ಚು ಸೇವಾಕಾರ್ಯಗಳನ್ನು ಮಾಡಿ ಬೆಳ್ತಂಗಡಿ ತಾಲ್ಲೂಕನ್ನು ಮಾದರಿ ತಾಲ್ಲೂಕಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಹೆಗ್ಗಡೆಯವರು ಭರವಸೆ ನೀಡಿದರು.