ಉಡುಪಿ, ನ 22 (DaijiworldNews/SM): ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉಡುಪಿ ಜಿಲ್ಲೆ ಮತ್ತು ಉಡುಪಿ ಜಿಲ್ಲಾ ನಾಗರೀಕ ಸೇವಾ ಸಮಿತಿ ಟ್ರಸ್ಟ್ ಉಡುಪಿ ಇವರು ಜಂಟಿ ಕಾರ್ಯಾಚರಣೆ ನಡೆಸಿ, ಕರಾವಳಿ ಬೈಪಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ಟೆಂಟ್ನಲ್ಲಿ ವಾಸವಿದ್ದ ರಾಜಸ್ಥಾನ ಮೂಲದ 5 ಕುಟುಂಬಗಳ ಒಟ್ಟು 26 ಮಂದಿಯನ್ನು ಸುರಕ್ಷಿತವಾಗಿ ಬೇರೆ ಕಡೆ ಸ್ಥಳಾಂತರಗೊಳ್ಳುವಂತೆ ತಿಳಿಸಿದ್ದಾರೆ. ಆ ಮೂಲಕ ದಾಯ್ಜಿವರ್ಲ್ಡ್ ನ ಸುದ್ದಿಗೆ ಫಲಶ್ರುತಿ ಸಿಕ್ಕಂತಾಗಿದೆ.
ಮಕ್ಕಳು ರಸ್ತೆ ಬದಿಯಲ್ಲಿ ವಾಸವಾಗಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳು ಸಂಚರಿಸುವುದರಿಂದ ಸಂಭವನೀಯ ದುರಂತ ತಪ್ಪಿಸುವ ನಿಟ್ಟಿನಲ್ಲಿ ಇಲಾಖೆ ಕ್ಷಿಪ್ರ ಕಾರ್ಯಾಚರಣೆ ಮೂಲಕ ನವಯುಗ ಕಂಪನಿಯ ಸಹಯೋಗದೊಂದಿಗೆ ನಿರಂತರವಾಗಿ ಟೆಂಟ್ ಹಾಕುವ ಪ್ರದೇಶಗಳಲ್ಲಿ ಜೆ.ಸಿ.ಬಿ ಮೂಲಕ ಅಗೆದು ಮುಂದೆ ಆ ಪ್ರದೇಶಗಳಲ್ಲಿ ವಲಸೆ ಕಾರ್ಮಿಕರು ಟೆಂಟ್ ಅಳವಡಿಸದಂತೆ ಮಾಡಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸದಾನಂದ, ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್, ಸಮಾಲೋಚಕಿ ಅಂಬಿಕಾ ಕೆ.ಎಸ್, ಸಮಾಜ ಕಾರ್ಯಕರ್ತ ಯೋಗೀಶ್ ಮತ್ತು ಜಿಲ್ಲಾ ನಾಗರೀಕ ಸೇವಾ ಸಮಿತಿ ಟ್ರಸ್ಟ್ನ ನಿತ್ಯಾನಂದ ಒಳಕಾಡು ಭಾಗವಹಿಸಿದ್ದರು.