ವಿಟ್ಲ, ನ 22 (DaijiworldNews/SM): ಹಳೆಯ ರೌಡಿಶೀಟರ್ ಯುವಕನೊಬ್ಬ ಬೈಕ್ನಲ್ಲಿ ಅತೀ ವೇಗವಾಗಿ ಚಾಲನೆ ಮಾಡಿದ್ದಾನೆ ಎಂದು ಆರೋಪಿಸಿ ವಿಟ್ಲ ಪೊಲೀಸ್ ಠಾಣೆಯ ಇಬ್ಬರು ಪ್ರೋಬೆಷನರಿ ಎಸೈಗಳು ಯುವಕನಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹಾಗೂ ಆತನ ಬೈಕನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಯುವಕ ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಪೊಲೀಸರ ವಿರುದ್ಧ ದೂರು ನೀಡಿದ್ದಾರೆ. ವಿಟ್ಲ ಪೇಟೆಯ ನಿವಾಸಿ, ಹಳೆಯ ರೌಡಿ ಶೀಟರ್ ಸಾಧಿಕ್ ಎಂಬಾತ ವಿಟ್ಲ ಪೇಟೆಯಿಂದ ಸ್ಪೈಸಿ ಹೋಟೆಲ್ ಬಳಿ ಇರುವ ತನ್ನ ಪ್ಲ್ಯಾಟ್ಗೆ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಹಿಂಬಾಲಿಸಿಕೊಂಡ ವಿಟ್ಲ ಪೊಲೀಸ್ ಠಾಣೆಯ ಪ್ರೋಬೆಷನರಿ ಎಸೈಗಳಾದ ವಿನೋದ್ ಕುಮಾರ್ ರೆಡ್ಡಿ, ರಾಜೇಶ್ ಹಾಗೂ ಸಿಬ್ಬಂದಿಗಳು ಸಾಧಿಕ್ ಬೈಕ್ನಿಂದ ಇಳಿಯುತ್ತಿದ್ದಂತೆ ಆತನನ್ನು ತರಾಟೆಗೆ ತೆಗೆದುಕೊಂಡು ಅವಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಈ ಬಗ್ಗೆ ಸಾಧಿಕ್ ಪ್ರಶ್ನಿಸುತ್ತಿದ್ದಂತೆ ಆತನಿಗೆ ಶೂನಿಂದ ತುಳಿದು ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ. ಸಾರ್ವಜನಿಕರು ಸೇರುತ್ತಿದ್ದಂತೆ ಪೊಲೀಸರು ಆತನ ಬೈಕನ್ನು ವಶಕ್ಕೆ ಪಡೆದುಕೊಂಡು ತೆರಳಿದ್ದಾರೆ.
ಬಳಿಕ ಸಾಧಿಕ್ನನ್ನು ಆತನ ಸ್ನೇಹಿತರು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸರಿಗೆ ಮಾಹಿತಿ ಕೂಡಾ ನೀಡಲಾಗಿದ್ದು, ಇದುವರೆಗೂ ಠಾಣೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎನ್ನಲಾಗಿದೆ. ಇದೀಗ ಸಾಧಿಕ್ ವಕೀಲರ ಮೂಲಕ ಖಾಸಗಿ ದೂರು ದಾಖಲಿಸಲು ಮುಂದಾಗಿದ್ದಾರೆ.
ಈ ಹಿಂದೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಸಾಧಿಕ್ ಮೇಲೆ ಹಲವು ಹಲ್ಲೆ, ಕೊಲೆ ಯತ್ನ ಪ್ರಕರಣಗಳು ದಾಖಲಾಗಿತ್ತು.