ಪುತ್ತೂರು ನ 22 (Daijiworld News/MSP): ಇಲ್ಲಿನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಅಲೆದಾಡುತ್ತಿದ್ದ ಮಾನಸಿಕ ಅಸ್ವಸ್ಥರೋರ್ವರನನ್ನು ಪುತ್ತೂರು ಮಹಿಳಾ ಪೊಲೀಸ್ ಠಾಣೆ ಎಸ್.ಐ ಸೇಸಮ್ಮ ಅವರು ಆತನ ಪೋಷಕರಿಗೆ ಒಪ್ಪಿಸಿ ಸಾಮಾಜಿಕ ಕಾಳಜಿ ತೋರಿದ ಘಟನೆ ಬೆಳಕಿಗೆ ಬಂದಿದೆ.
ಮಹಿಳಾ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಉಪನಿರೀಕ್ಷಕಿ ಸೇಸಮ್ಮ ರವರು ನ.21ರಂದು ರಾತ್ರಿ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾಗ ರಾತ್ರಿ ಸುಮಾರು 2 ಗಂಟೆಗೆ ಪುತ್ತೂರು ಬಸ್ ನಿಲ್ದಾಣದ ಬಳಿ ಮಾನಸಿಕ ಅಸ್ವಸ್ಥ ವ್ಯಕ್ತಿಯೋರ್ವ ತಿರುಗಾಡುತ್ತಿರುವುದು ಗಮನಿಸಿದ್ದಾದೆ. ಬಳಿಕ ಆತನನ್ನು ವಿಚಾರಿಸಿದಾಗ ಸರಿಯಾದ ಮಾಹಿತಿ ನೀಡಿರಲಿಲ್ಲ. ಆತ ನೀಡಿದ ದೂರವಾಣಿ ಸಂಖ್ಯೆಯ ಮೂಲಕ ಆತನ ಹೆತ್ತವರನ್ನು ಸಂಪರ್ಕಿಸಿದ್ದಾರೆ. ಈ ವೇಳೆ ಆತ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ನ.19ರಂದು ಮನೆಯಿಂದ ತಪ್ಪಿಸಿಕೊಂಡಿರುವುದು ತಿಳಿದುಬಂದಿದೆ.
ಆತನಿಗಾಗಿ ಹುಡುಕಾಟ ನಡೆಸಿ ಪತ್ತೆಯಾಗದೇ ಆತನ ವಯೋವೃದ್ದ ತಂದೆ-ತಾಯಿ ಚಿಂತಿತರಾಗಿರುವ ವಿಚಾರ ತಿಳಿದು ಕೂಡಲೇ ತಮ್ಮ ವಾಹನದಲ್ಲಿ ಆತನನ್ನು ಕರೆದುಕೊಂಡು ಹೋಗಿ ಆತನ ಮನೆಗೆ ತಲುಪಿಸಿದ್ದಾರೆ. ತಮ್ಮ ಇಲಾಖಾ ಕರ್ತವ್ಯದೊಂದಿಗೆ ಸಾಮಾಜಿಕ ಕಾಳಜಿಯನ್ನು ತೋರಿದ ಮಹಿಳಾ ಪೊಲೀಸ್ ಉಪನಿರೀಕ್ಷಕಿ ಸೇಸಮ್ಮ ರವರು ಇಲಾಖೆಯಲ್ಲಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.