ಸುಲ್ತಾನ್ ಬತ್ತೇರಿ, ನ 21 (Daijiworld News/MSP): ಪಾಠ ಕೇಳುವುದರಲ್ಲಿ ತಲ್ಲೀನಳಾಗಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ತರಗತಿಯಲ್ಲಿ ಹಾವು ಕಚ್ಚಿ ಆಕೆ ದಾರುಣವಾಗಿ ಮೃತಪಟ್ಟ ಘಟನೆ ಸುಲ್ತಾನ್ ಬತ್ತೇರಿಯಲ್ಲಿರುವ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿನಿಯನ್ನು ನ್ಯಾಯವಾದಿ ಅಬ್ದುಲ್ ಆಸೀಝ್ ಹಾಗೂ ನ್ಯಾಯವಾದಿ ಸಜ್ನಾ ದಂಪತಿಗಳ ಪುತ್ರಿ ಶಹಲಾ ಶೆರಿನ್ (10) ಎಂದು ಗುರುತಿಸಲಾಗಿದೆ. ಶಹಲಾ ಶೆರಿನ್ ಸರ್ವಜನ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ 5ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಮಧ್ಯಾಹ್ನ 3.30 ರ ಸುಮಾರಿಗೆ ತರಗತಿಯ ನೆಲದ ಮೇಲಿದ್ದ ರಂಧ್ರದೊಳಗೆ ಮಲಗಿದ್ದ ಹಾವು ಬಾಲಕಿಯನ್ನು ಕಚ್ಚಿದೆ.
ತನ್ನ ಕಾಲಿನಲ್ಲಿದ್ದ ಎರಡು ಗಾಯದ ಗುರುತುಗಳನ್ನು ಗಮನಿಸಿದ ಶಹ್ಲಾ ತಕ್ಷಣ ಈ ವಿಚಾರವನ್ನು ತನ್ನ ಶಿಕ್ಷಕರ ಗಮನಕ್ಕೆ ತಂದಿದ್ದಾಳೆ. ಶಾಲಾ ಆಡಳಿತ ಮಂಡಳಿ ನೀಡಿದ ಮಾಹಿತಿಯ ಮೇರೆಗೆ ಬಳಿಕ ಆಕೆಯ ಪೋಷಕರು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ದುರದೃಷ್ಟವಶಾತ್, ಆಸ್ಪತ್ರೆಯ ವೈದ್ಯರು ಹಾವಿನ ಕಚ್ಚಿರುವ ವಿಚಾರವನ್ನು ಖಚಿತಪಡಿಸಲು ವಿಫಲರಾಗಿದ್ದಾರೆ. ನಂತರ ಆಕೆಯನ್ನು ಬತ್ತೇರಿಯ ತಾಲೂಕು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲೂ ಕೂಡಾ ಆಕೆಯನ್ನು ಪರಿಶೀಲಿಸಿದ ವೈದ್ಯರು ಹಾವು ಕಚ್ಚಿರುವ ಬಗ್ಗೆ ಧೃಡಪಡಿಸಲು ವಿಫಲರಾಗಿದ್ದಾರೆ.
ಈ ವೇಳೆಗಾಗಲೇ ಶಹ್ಲಾ ವಾಂತಿ ಮಾಡಲು ಪ್ರಾರಂಭಿಸಿದಾಗ, ತಾಲೂಕು ಆಸ್ಪತ್ರೆಯ ವೈದ್ಯರು ಕೋಝಿಕೋಡ್ ಮೆಡಿಕಲ್ ಕಾಲೇಜಿಗೆ ಕರೆದೊಯ್ಯುವಂತೆ ತಿಳಿಸಿದ್ದಾರೆ. ಆದರೆ ಅಲ್ಲಿಗೆ ಕರೆದೊಯ್ಯುವ ದಾರಿ ಮದ್ಯೆ ಉಸಿರಾಟದ ಸಮಸ್ಯೆ ಕಾಣಿಸಿ ಆಕೆಯ ಸ್ಥಿತಿ ಗಂಭೀರವಾಗಿ ಚೆಲೋಡ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿನ ವೈದ್ಯರು ಹಾವು ಕಚ್ಚಿರುವ ವಿಚಾರ ದೃಢಪಡಿಸಿದರೂ, ವೈದ್ಯರು ಆಕೆಯ ಜೀವ ಉಳಿಸುವಲ್ಲಿ ವಿಫಲರಾಗಿದ್ದಾರೆ.
ಗುರುವಾರ ಮಧ್ಯಾಹ್ನ 12ರ ಸುಮಾರಿಗೆ ಪುಥನ್ಕುನ್ನು ಜುಮಾ ಮಸೀದಿಯಲ್ಲಿ ಶಹ್ಲಾ ಅಂತ್ಯಕ್ರಿಯೆ ನಡೆಯಲಿದೆ ಎಂದು ವರದಿಯಾಗಿದೆ.