ಮೂಡುಬಿದಿರೆ, ನ 19 (DaijiworldNews/SM): ಮೈಕ್ರೋಫೈನಾನ್ಸ್ಗಳು ಸಾಲ ವಸೂಲಾತಿಯಲ್ಲಿ ನಡೆಸುವ ದೌರ್ಜನ್ಯವನ್ನು ಖಂಡಿಸಿ ಮತ್ತು ಈ ಫೈನಾನ್ಸ್ಗಳು ನೀಡಿರುವ ಕಾನೂನು ಬಾಹಿರ ಸಾಲಗಳನ್ನು ಮನ್ನಾಮಾಡಬೇಕು. ರಾಷ್ಟ್ರೀಕೃತ ಬ್ಯಾಂಕ್ಗಳು ಬಡವರಿಗೆ ಸಾಲ ನೀಡಬೇಕೆಂದು ಒತ್ತಾಯಿಸಿ ಬಡಸಾಲ ಸಂತ್ರಸ್ತ ಕುಟುಂಬಗಳು ಮತ್ತು ನಾಗರಿಕರಿಂದ ಪ್ರತಿಭಟನಾ ಸಭೆಯು ಸಮಾಜಮಂದಿರಲ್ಲಿ ಮಂಗಳವಾರ ನಡೆಯಿತು.
ದ.ಕ ಜಿಲ್ಲಾ ಋಣಮುಕ್ತ ಹೋರಾಟ ಸಮಿತಿಯ ಸಂಚಾಲಕ, ವಕೀಲ ಬಿ.ಎಂ. ಭಟ್ ಮಾತನಾಡಿ, ಮೈಕ್ರೋಫೈನಾನ್ಸ್ಗಳು ಮೈಕ್ರೋ ಫೈನಾನ್ಸ್ ದಬ್ಬಾಳಿಕೆ ವಿರುದ್ಧ ಪ್ರತಿ ಗ್ರಾಮಪಂಚಾಯಿತಿ ಮಟ್ಟದಲ್ಲಿ ಗ್ರಾಮಸಭೆಗಳಲ್ಲಿ ನಿರ್ಣಯ ಕೈಗೊಂಡು ಸರ್ಕಾರಕ್ಕೆ ತಲುಪಿಸಬೇಕು. ಸಂತ್ರಸ್ತರಿಗೆ ಸೂಕ್ತ ಕಾನೂನು ನೆರವನ್ನು ಸಮಿತಿಯು ನೀಡಲಿದೆ ಎಂದರು.
ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಬಡವರಿಗೆ ತ್ವರಿತಗತಿಯಲ್ಲಿ 50 ಸಾವಿರ ರೂಪಾಯಿ ಸಾಲ ನೀಡುವಂತೆ ಕೇಂದ್ರ ಸರ್ಕಾರವು ಕಾನೂನು ರೂಪಿಸಬೇಕೆಂದು ಆಗ್ರಹಿಸಿದರು. ಕಾರ್ಕಳ ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷ ಮಂಜುನಾಥ್, ಬೆಳ್ತಂಗಡಿ ತಾಲೂಕು ದಲಿತ ಸಂಘರ್ಷ ಸಮಿತಿ ಮುಖಂಡ ನೇಮಿರಾಜ್ ಕಿಲ್ಲೂರು, ಹೋರಾಟ ಸಮಿತಿಯ ಅಧ್ಯಕ್ಷೆ ವಿನೋದ, ಕಾರ್ಯದರ್ಶಿ ಆಸೀಫ್, ಬೀಡಿ ಕಾರ್ಮಿಕರ ಸಂಘದ ಉಪಾಧ್ಯಕ್ಷೆ ನಬೀಸಾ ಮತ್ತಿತರರು ಉಪಸ್ಥಿತರಿದ್ದರು.