ಕುಂದಾಪುರ, ನ 19 (Daijiworld News/MSP): "ಯಾರದ್ದೋ ಪ್ರಚಾರದ ಗೀಳಿಗೆ ಬಲಿಯಾದನೇ ವೈರಲ್ ವೈಕುಂಠ" ಹೀಗೊಂದು ಪ್ರಶ್ನೆ ಆತನನ್ನು ಬಲ್ಲವರನ್ನು ಕಾಡದೆ ಬಿಡದು. ಮೃತಪಟ್ಟ ವೈಕುಂಠ ಕುಂದಾಪುರದ ರಾಕ್ ಸ್ಟಾರ್ ಖ್ಯಾತಿ ಪಡೆದಿದ್ದ. ಮಾತ್ರವಲ್ಲದೆ ದಲಿತ ಸಮುದಾಯದ ಉತ್ತಮ ಹಾಡುಗಾರನಾಗಿದ್ದ.
ಆದರೆ ಕೌಟುಂಬಿಕ ಸಮಸ್ಯೆಯ ಹಿನ್ನಲೆಯಲ್ಲಿ ಮಾನಸಿಕರೋಗಿಯಾಗಿದ್ದ. ಈತ ಅದ್ಬುತ ಕಂಠ ಸಿರಿಯ ಹೊಂದಿದ್ದು, ಇದನ್ನೇ ಬಂಡವಾಳಮಾಡಿಕೊಂಡ ಒಂದಷ್ಟು ಜನ ಆತನಿಗೆ ಮದ್ಯಪಾನ ಮಾಡಲು ಹಣ ನೀಡಿ, ಆತನಿಂದ ಹಾಡು ಹಾಡಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವ ಅಭ್ಯಾಸವನ್ನು ಕುಂದಾಪುರದಲ್ಲಿ ಹಲವರು ಮಾಡಿಕೊಂಡಿದ್ದರು. ತನ್ನ ಜನಪ್ರಿಯತೆ ಹೆಚ್ಚುತ್ತಿದ್ದಂತೆ ವೈಕುಂಠನಲ್ಲಿ ಕುಡಿತದ ಚಟವೂ ಹೆಚ್ಚುತ್ತಾ ಹೋಯಿತು.
ಸಾಮಾಜಿಕ ಜಾಲತಾಣದ ಲೈಕ್ ಕಮೆಂಟ್ ಗಳ ಮಧ್ಯೆ ಕುಡಿತದ ಚಟದಿಂದ ಆನಾರೋಗ್ಯಕ್ಕೆ ತುತ್ತಾದಾಗ ಮಾತ್ರ ಆತ ಯಾರಿಗೂ ಬೇಕಾಗಿರಲಿಲ್ಲ. ಹೇಗೇ ಅದೇ ಸಾಮಾಜಿಕ ಜಾಲತಾಣದಲ್ಲಿ ಆತನ ಅನಾರೋಗ್ಯ ಸದ್ದು ಮಾಡಿದಾಗ ಒಂದಿಷ್ಟು ಯುವಕರು ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲದೇ ದಾಖಲಿಸುವ ಸಂದರ್ಭ ವೈದ್ಯಾಧಿಕಾರಿಗಳ ಜೊತೆ ದೂರು ದಾಖಲಾಗುವ ಮಟ್ಟಕ್ಕೆ ಜಗಳವಾಡಿದ್ದಾರೆ.
ಮನೋರೋಗ ಮತ್ತು ಪಾರ್ಕಿನ್ಸ್ನ್ ಕಾಯಿಲೆಗೆ ತುತ್ತಾಗಿದ್ದ ವೈಕುಂಠನಿಗೆ ಜಿಲ್ಲಾಸ್ಪತ್ರೆಯಲ್ಲಿ ಸೌಲಭ್ಯವಿಲ್ಲದೇ ಸೂಕ್ತ ಚಿಕಿತ್ಸೆ ದೊರಕದ ಹಿನ್ನಲೆಯಲ್ಲಿ ಮೃತಪಟ್ಟಿದ್ದಾನೆ. ಅನಾರೋಗ್ಯ ಪೀಡಿತನನ್ನು ದಾಖಲಿಸಿ ವೈದ್ಯರೊಂದಿಗೆ ಜಗಳವಾಡಿ ಮತ್ತೆ ಆಸ್ಪತ್ರೆ ಕಡೆ ತಿರುಗಿ ನೋಡದವರು ವೈಕುಂಠ ಸಾವಿನ ಬಳಿಕ ಪ್ರತಿಭಟನೆ ನಡೆಸಿದ್ದಾರೆ. ಈ ಘಟನೆ ಕುರಿತು ವೈದ್ಯರಾದ ನಾಗೇಶ್ ಪ್ರತಿಕ್ರಿಯೆ ನೀಡಿದ್ದು, ಸರಕಾರಿ ಆಸ್ಪತ್ರೆ ಇರುವುದೇ ಬಡವರಿಗಾಗಿ. ನಾವು ವೈಕುಂಠನನ್ನು ಅಡ್ಮಿಟ್ ಮಾಡಿ ಸಾಧ್ಯವಾದ ಮಟ್ಟಿಗೆ ಚಿಕಿತ್ಸೆ ನೀಡಿದ್ದೇವೆ. ವೆಂಟಿಲೇಟರ್ ನಲ್ಲಿಟ್ಟದ್ದ ರೋಗಿ ಬದುಕುವ ಸಾಧ್ಯತೆ ಶೇಕಡಾ 50 ಮಾತ್ರ. ದುರಾದೃಷ್ಟವಶಾತ್ ವೈಕುಂಠ ಸಾವನ್ನಪ್ಪಿದ್ದಾರೆ. ಇದರಲ್ಲಿ ನಮ್ಮ ನಿರ್ಲಕ್ಷ್ಯ ಇಲ್ಲ" ಎಂದು ಮಾಧ್ಯಮದವರಿಗೆ ಸ್ಪಷ್ಟೀಕರಣ ನೀಡಿದ್ದಾರೆ.