ಮಂಗಳೂರು: ಸ್ವಂತ ಖರ್ಚಿನಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುತ್ತಿರುವ ಉದ್ಯಮಿ ಗಿಲ್ಬರ್ಟ್ ಡಿಸೋಜಾ
Tue, Nov 19 2019 12:04:24 PM
ಮಂಗಳೂರು, ನ 19(Daijiworld News/MB): ರಸ್ತೆಗುಂಡಿಗಳಿದ್ದರೆ ಸರಕಾರವನ್ನು ದೂಷಿಸುವುದು ಮಾಮೂಲು ಆದರೆ ಇದೆಲ್ಲದಕ್ಕಿಂತ ಭಿನ್ನವಾಗಿ ನಿಂತಿದ್ದಾರೆ ಈ ವ್ಯಕ್ತಿ.
ರಸ್ತೆ ಬಳಸುವ ನಮಗೂ ರಸ್ತೆಗುಂಡಿಗಳನ್ನು ಮುಚ್ಚಬಹುದಲ್ಲವೇ ಎಂದು ಪ್ರಶ್ನಿಸುವ ಅವರು ರಸ್ತೆ ಗುಂಡಿಗಳನ್ನು ಮುಚ್ಚುವ ಪಣ ತೊಟ್ಟಿದ್ದಾರೆ. ಇವರೇ ಕರಾವಳಿಯ ಉದ್ಯಮಿ ಗಿಲ್ಬರ್ಟ್ ಡಿಸೋಜಾ.
ಈಗಾಗಲೇ ಇವರು ಅಂಬೇಡ್ಕರ್ (ಜ್ಯೋತಿ) ವೃತ್ತ, ಮಿಲಾಗ್ರಿಸ್ ಮತ್ತು ಸ್ಟೇಟ್ ಬ್ಯಾಂಕ್ ಗಳಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಿದ್ದು ಇಂಡಿಯನ್ ಸರ್ವಿಸ್ ಕ್ಲಬ್ನ ತಂಡದ ಸದಸ್ಯರ ಜೊತೆ ಸೇರಿ ಜ್ಯೋತಿ ಸರ್ಕಲ್ ನಗರದ ರಸ್ತೆ ಗುಂಡಿಗಳನ್ನು ಮುಚ್ಚಲು ಮುಂದಾಗಿದ್ದಾರೆ. ಇದಕ್ಕಾಗಿ ಸ್ಚತಹ ತಮ್ಮದೇ ಖರ್ಚಿನಲ್ಲಿ ಜೆಸಿಬಿ, ಟಿಪ್ಪರ್ ಲಾರಿ, ಮರಳು ಮತ್ತು ಇಂಟರ್ಲಾಕ್ ಗಳ ವ್ಯವಸ್ಥೆಯನ್ನು ಮಾಡಿದ್ದಾರೆ. ಅವರ ಈ ಕಾರ್ಯಕ್ಕೆ ಶ್ಲಾಘಿಸಿದ ಟ್ರಾಫಿಕ್ ಪೊಲೀಸರು ಮತ್ತು ಟ್ರಾಫಿಕ್ ವಾರ್ಡನ್ಗಳು ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿರುವಾಗ ಸಂಚಾರವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡಿದ್ದಾರೆ. ಈ ಕಾರ್ಯದಲ್ಲಿ ಸಿವಿಕ್ ಗುಂಪಿನ ಸದಸ್ಯರು ಹಾಗೂ ಸಂಚಾರ ಪೊಲೀಸ್ ಸಿಬ್ಬಂದಿಗಳು ಕೂಡಾ ಸೇರಿಕೊಂಡು ನಗರದ ರಸ್ತೆಗಳ ಸುವ್ಯವಸ್ಥೆಗಾಗಿ ಗಿಲ್ಬರ್ಟ್ ಅವರು ತೆಗೆದುಕೊಂಡ ಕ್ರಮವನ್ನು ಪ್ರೋತ್ಸಾಹಿಸಿದರು.
ಈ ಸಂದರ್ಭ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಕಮಿಷನರ್ ಡಾ.ಪಿ.ಎಸ್. ಹರ್ಷ ಅವರು ಸಮಾಜಮುಖಿಯಾಗಿ ಕೆಲಸ ಮಾಡುತ್ತಿರುವ ಗಿಲ್ಬರ್ಟ್ರ ನಾಯಕತ್ವದ ತಂಡವನ್ನು ಶ್ಲಾಘಿಸಿದ್ದಾರೆ. ಹಾಗೆಯೇ ಈ ತಂಡಕ್ಕೆ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಮಾಡುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.
ಈ ಕುರಿತು ದೈಜಿವರ್ಲ್ಡ್ ಜೊತೆ ಮಾತನಾಡಿದ ಗಿಲ್ಬರ್ಟ್, “ಕಳೆದ ಕೆಳವು ದಿನಗಳಿಂದ ನಾವು ನಗರದ ಹಲವು ಕಡೆ ರಸ್ತೆಗಳ ಗುಂಡಿಗಳನ್ನು ಮುಚ್ಚಿದ್ದೇವೆ. ನಮ್ಮ ಈ ಕಾರ್ಯವನ್ನು ನೋಡಿದ ಸಮಾಜದ ಕಾಳಜಿಯುಳ್ಳ ಅನೇಕರು ಸ್ವಯಂಪ್ರೇರಣೆಯಿಂದ ಕೈಜೋಡಿಸಿದ್ದಾರೆ. ಹಾಗಾಗಿ ಇಂದು ನಾವೆಲ್ಲರೂ ಒಗ್ಗೂಡಿ ರಸ್ತೆಗಳ ಗುಂಡಿ ಮುಚ್ಚುವ ಕಾರ್ಯ ಪ್ರಾರಂಭ ಮಾಡಿದ್ದೇವೆ" ಎಂದರು.
"ನಮ್ಮ ಆಡಳಿತದ ಕಾರ್ಯ ಶೈಲಿ ಎಲ್ಲರಿಗೂ ತಿಳಿದಿರುವಂತದ್ದು. ಎಲ್ಲವನ್ನು ದೂಷಿಸುವ ಬದಲು ಅಪಘಾತಗಳನ್ನು ತಪ್ಪಿಸಿ ಜೀವಗಳನ್ನು ಉಳಿಸುವ ನಿಟ್ಟಿನಲ್ಲಿ ನಾವು ಗಮನ ಹರಿಸಬೇಕು. ನಗರದ ನಾಗರಿಕರು ಈ ಕಾರ್ಯವನ್ನು ಕೈಗೆತ್ತಿಕೊಂಡರೆ ಒಂದು ದಿನದಲ್ಲಿ ನಗರದ ಎಲ್ಲಾ ರಸ್ತೆಗಳ ಗುಂಡಿಗಳನ್ನು ಮುಚ್ಚಬಹುದು" ಎಂದು ಹೇಳಿದರು.
ನನ್ನೊಂದಿಗೆ ಸ್ವಯಂಪ್ರೇರಣೆಯಿಂದ ಸೇರಿಕೊಂಡ ಇಂಡಿಯನ್ ಸರ್ವಿಸ್ ಕ್ಲಬ್ ಮತ್ತು ಸಿವಿಕ್ ಗುಂಪಿನ ಎಲ್ಲ ಸದಸ್ಯರಿಗೆ ಧನ್ಯವಾದ ಅರ್ಪಿಸುತ್ತೇನೆ. ಪೊಲೀಸ್ ಇಲಾಖೆಯೂ ಸರಕಾರ ಉತ್ತಮ ನೀಡುತ್ತಿದೆ. ಟ್ರಾಫಿಕ್ ಪೊಲೀಸ್ ಇಲಾಖೆ ಮತ್ತು ನಗರದ ಪೊಲೀಸ್ ಆಯುಕ್ತರಿಗೆ ನನ್ನ ವಿಶೇಷ ಧನ್ಯವಾದಗಳು. ನಾವೆಲ್ಲರೂ ಸಹಕಾರಿ ಮನಸ್ಸಿನೊಂದಿಗೆ ಸೇರಿಕೊಂಡರೆ ನಗರದ ಸುಧಾರಣೆ ಖಂಡಿತವಾಗಿಯು ಆಗುತ್ತದೆ. ನಗರವು ಯಾವುದೇ ಇಲ್ಲದೆ ಸ್ಮಾರ್ಟ್ ಆಗುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ತಿಳಿಸಿದ್ದಾರೆ.
ಸ್ಟಾನಿ ಸುವರಿಸ್, ಲ್ಯಾನ್ಸಿ ಮೆನೆಜೆಸ್, ಅರ್ಜುನ್, ಅಲೋಶಿಯಸ್ ಅಲ್ಬುಕರ್ಕ್, ವಿನ್ಸೆಂಟ್ ಡಿ ಸಿಲ್ವಾ ಮತ್ತು ಇತರರು ಈ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು.