ಪುತ್ತೂರು, ನ 19 (Daijiworld News/MSP): ಗ್ಯಾಸ್ ಪಂಪ್ ಆರಂಭಿಸುವ ಆಸೆಯಿಂದ ಆನ್ ಲೈನ್ ಗೆ ಅರ್ಜಿ ಸಲ್ಲಿಸಿ , ಲಕ್ಷಾಂತರ ರೂ. ಹಣ ಪಾವತಿಸಿ ಆನ್ ಲೈನ್ ಮೂಲಕ ವ್ಯಕ್ತಿಯೊಬ್ಬರು ವಂಚನೆಗೊಳಗಾಗಿದ್ದಾರೆ.
ಪುತ್ತೂರು ನರಿಮೊಗರು ನಿವಾಸಿ ಮಾಜಿ ಸೈನಿಕ ಗಣೇಶ್ ಎಂಬವರು ವಂಚನೆಗೊಳಗಾದವರು. ಇವರು 13,65,600 ರೂ ಕಳಕೊಂಡಿದ್ದಾರೆ. ಗಣೇಶ್ ಅವರು ಗ್ಯಾಸ್ ಪಂಪ್ ಸಂಸ್ಥೆ ಪ್ರಾರಂಭಿಸಲು ಸಂಸ್ಥೆಯೊಂದಕ್ಕೆ ಇಂಟರ್ನೆಟ್ ಮೂಲಕ ಸಂಪರ್ಕ ಮಾಡಿ ಮಾಹಿತಿ ಪಡೆದು ಆನ್ ಲೈನ್ ಅರ್ಜಿ ಭರ್ತಿ ಮಾಡಿ ತನ್ನೆಲ್ಲಾ ದಾಖಲೆಗಳನ್ನು ಸಲ್ಲಿಕೆ ಮಾಡಿದ್ದರು.
ಇದಕ್ಕೆ ಪ್ರತಿಯಾಗಿ ಸಂಸ್ಥೆಯೂ ಕೇಳಿದ ವಾಟ್ಸಾಪ್ ಸಂಖ್ಯೆ, ಆಧಾರ್ ಕಾರ್ಡ್, ಮೊಬೈಲ್ ನಂಬರ್ ನೀಡಿದ್ದರು. ಇದೆಲ್ಲವೂ ಆದ ಬಳಿಕ ಅತ್ತ ಕಡೆಯಿಂದ ಅರ್ಜಿ ನೋಂದಾವಣೆಗಾಗಿ ನ.11ಕ್ಕೆ ರೂ. 30ಸಾವಿರ, ಅರ್ಜಿ ವೆರಿಫಿಕೇಶನ್ ಆಗಿದೆ ಎಂದು ನ.12ಕ್ಕೆ ರೂ. 3.75ಲಕ್ಷ, ಅದೇ ದೀನ ಡೀಲರ್ ಶಿಪ್ಗಾಗಿ ರೂ. 1.65,100, ಸೆಕ್ಯೂರಿಟಿಗಾಗಿ ರೂ. 4ಲಕ್ಷ, ಇನ್ಸೂರೆನ್ಸ್ಗಾಗಿ ರೂ. 3,95,500 ಕೇಳಿದ್ದು ಎಲ್ಲವನ್ನೂ ಗಣೇಶ್ರವರು ಪಾವತಿ ಮಾಡಿದ್ದರು. ನ.16ಕ್ಕೆ ಸ್ಥಳ ಪರಿಶೀಲನೆ ಮಾಡಲು ಬರುವುದಾಗಿ ಸಂದೇಶ ಬಂದಿತ್ತು.
ಆ ಬಳಿಕ ಇವರಿಗೆ ಮಾಹಿತಿ, ದಾಖಲೆಗಳನ್ನು ನೀಡಿರುವುದು ನಕಲಿ ಆನ್ಲೈನ್ ಖಾತೆಗೆ ಎನ್ನುವುದು ಅರಿವಾಗಿತ್ತು. ಆ ವೇಳೆಗಾಗಲೇ ಅವರು ಲಕ್ಷಾಂತರ ರೂ ಕಳೆದುಕೊಂಡಿದ್ದರು. ಇವರ ಕುರಿತು ಗಣೇಶ್ ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.