ಕುಂದಾಪುರ, ನ 19(Daijiworld News/MB): ಬೆಳ್ವೆಯ ಸರಕಾರಿ ಶಾಲೆಯ 5 ನೇ ತರಗತಿ ವಿದ್ಯಾರ್ಥಿ ಹರ್ಷಿತ್ ಶಾಲೆಗೆ ತೆರಳುತ್ತಿದ್ದ ವೇಳೆ ಓಮ್ನಿಯಲ್ಲಿ ಬಂದ ದುಷ್ಕರ್ಮಿಗಳು ರಾಸಾಯನಿಕ ಸ್ಪ್ರೇ ಮಾಡಿ ಪ್ರಜ್ಞೆ ತಪ್ಪಿಸಿ ಅಪಹರಣ ಯತ್ನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಕುರಿತು ಯಾವುದೇ ಸುಳಿವು ದೊರೆತಿಲ್ಲ.
ಈ ಪ್ರಕರಣಕ್ಕೆ ಸಂಬಂಧಿಸಿ ಕುಂದಾಪುರ ತಾಲೂಕು ಪಂಚಾಯತ್ ಸದಸ್ಯರು ನವೆಂಬರ್ 18 ರ ಸೋಮವಾರ ವಿದ್ಯಾರ್ಥಿಯನ್ನು ಶಾಲೆಯಲ್ಲಿ ಭೇಟಿಯಾಗಿ ಮಾಹಿತಿ ಪಡೆದುಕೊಂಡಿದ್ದಾರೆ.
ಈ ಪ್ರಕರಣದ ತನಿಖೆಗೆಂದು ಗೋಳಿಯಂಗಡಿ ಸರ್ಕಲ್ ನಲ್ಲಿದ್ದ ಸಿಸಿಟಿವಿಯನ್ನು ಪರಿಶೀಲಿಸಿದ್ದು, ಸಿಸಿಟಿವಿ ಕೆಟ್ಟಿರುವುದು ಗಮನಕ್ಕೆ ಬಂದಿದೆ.
ಬೆಳ್ವೆ ಹಾಗೂ ಗೋಳಿಯಂಗಡಿ ಪರಿಸರದಲ್ಲಿ ನಡೆದ ಹಲವಾರು ಅಪರಾಧ ಪ್ರಕರಣದಲ್ಲಿ ಆರೋಪಿ ಪತ್ತೆಯಾಗದ ಕಾರಣ ಪೊಲೀಸ್ ಇಲಾಖೆ ಗೋಳಿಯಂಗಡಿ ಸರ್ಕಲ್ ಬಳಿ ಸಿಸಿಟಿವಿ ಅಳವಡಿಸಿತ್ತು. ಆದರೆ ಈ ಸಿಸಿಟಿವಿ ಕಾರ್ಯನಿರ್ವಹಿಸದೆ ಇರುವುದು ಇದುವರೆಗೂ ಪೊಲೀಸ್ ಇಲಾಖೆಯ ಗಮನಕ್ಕೆ ಬಂದಿರದೆ ಈ ತನಿಖೆಯ ವೇಳೆ ತಿಳಿದು ಬಂದಿದೆ.
"ತನಿಖೆಗೆ 2 ತಂಡ ರಚಿಸಿದ್ದು, ತನಿಖೆ ಮುಂದುವರೆದಿದೆ. ನಾವು ಈಗಾಗಲೇ ಹಲವು ಕಡೆಗಳಲ್ಲಿ ಇರುವ ಸಿಸಿಟಿವಿಗಳನನ್ನು ಪರಿಶೀಲನೆ ನಡೆಸಿದ್ದೇವೆ. ಇದು ಮೇಲ್ನೋಟಕ್ಕೆ ಅಪಹರಣ ಪ್ರಕರಣದಂತೆ ಕಂಡು ಬರುತ್ತಿದ್ದು ಗೋಳಿಯಂಗಡಿಯಲ್ಲಿರುವ ಸಿಸಿಟಿವಿ ಕಾರ್ಯಾಚರಿಸುತ್ತಿದ್ದರೆ ತನಿಖೆಗೆ ಅನುಕೂಲವಾಗುತ್ತಿತ್ತು" ಎಂದು ಶಂಕರನಾರಾಯಣ ಠಾಣೆಯ ಒನ್ ಚಾರ್ಜ್ ಎಸ್ಐ ಶೇಖರ್ ಅವರು ತಿಳಿಸಿದ್ದಾರೆ.
ಕುಂದಾಪುರ: ವಿದ್ಯಾರ್ಥಿಗೆ ರಾಸಾಯನಿಕ ಸ್ಪ್ರೇ ಮಾಡಿದ ದುಷ್ಕರ್ಮಿಗಳು - ಕಿಡ್ನಾಪ್ ಗೆ ವಿಫಲ ಯತ್ನ?