ಮಂಗಳೂರು, ನ.19(Daijiworld News/SS): ಪ್ರವಾದಿ (ಸ) ಅವರನ್ನು ಸ್ಮರಿಸುವ, ಅವರ ಹೆಸರಲ್ಲಿ ನಡೆಯುವ ಯಾವುದೇ ಸಭೆ, ಸಮಾರಂಭದಲ್ಲಿ ಭಾಗವಹಿಸುವುದು ಸಮಯ ವ್ಯರ್ಥ ಅಥವಾ ನಿಷ್ಪ್ರಯೋಜಕ ಎಂದು ಭಾವಿಸುವುದು ಸಲ್ಲ ಎಂದು ಮುಹಮ್ಮದ್ ಯಾಸೀನ್ ಅಲ್-ಹೈದ್ರೋಸಿ ಸಖಾಫಿ ತಂಙಳ್ ಕೆದುಂಬಾಡಿ ನುಡಿದರು.
ಇನೋಳಿ ಬಿ'ಸೈಟ್ ಹಿದಾಯತುಲ್ ಇಸ್ಲಾಂ ಮದರಸ ಮಕ್ಕಳ ಸಾಹಿತ್ಯ ಸಂಗಮದ ನೇತೃತ್ವ ವಹಿಸಿ ಮಾತನಾಡಿದ ತಾಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಮೋನು, ಇಂದಿನ ಕ್ಲಿಷ್ಟಕರ ದಿನಗಳಲ್ಲಿ ಸಮಾಜದಲ್ಲಿ ತಾಳ್ಮೆ, ಸಹನೆ, ಸಮಾಧಾನದಿಂದ ಜೀವನ ಸಾಗಿಸುವ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಸಮುದಾಯದ ಯುವಕರು ಶ್ರಮಿಸಬೇಕು. ಪ್ರವಾದಿ (ಸ) ಅವರ ಚರ್ಯೆ ಎಲ್ಲವನ್ನೂ ಜೀವನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗದಿದ್ದರೂ ಒಂದಷ್ಟನ್ನಾದರೂ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ತಿಳಿಸಿದರು.
ಇನೋಳಿ ಜಾಮಿಯಾ ಮುಬಾರಕ್ ಮಸೀದಿಯ ಖತೀಬ್ ಯು.ಕೆ.ಅಬೂಬಕ್ಕರ್ ಮದನಿ ಅಧ್ಯಕ್ಷತೆ ವಹಿಸಿ, ಆಧುನಿಕ ಯುಗದಲ್ಲಿ ಜೀವಿಸುತ್ತಿರುವ ಮನುಷ್ಯ ಸಾಮಾಜಿಕ ಜಾಲತಾಣದಲ್ಲಿ ಮುಳುಗಿದ್ದು, ದೇವಭಯ ಮಾಯವಾಗಿದೆ. ನಮ್ಮ ಮನಸ್ಸು ಪರಿವರ್ತನೆ ಆಗದಿದ್ದರೆ ಧಾರ್ಮಿಕ ಕಾರ್ಯಕ್ರಮಗಳು ಎಷ್ಟು ನಡೆಸಿದರೂ ನಿಷ್ಪ್ರಯೋಜಕ. ಮದರಸದಲ್ಲಿ ಮಕ್ಕಳು ಕೇವಲ ಒಂದೆರಡು ಗಂಟೆ ಮಾತ್ರ ಇದ್ದರೆ ಉಳಿದ ಸಮಯ ಹೆತ್ತವರ ಜೊತೆ ಇರುತ್ತಾರೆ. ಈ ಅವಧಿಯಲ್ಲಿ ಮಕ್ಕಳ ಮೇಲೆ ನಿಗಾ ಇಟ್ಟು ಸರಿದಾರಿಯಲ್ಲಿ ಸಾಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಎಸ್ಎಂಎ ಕೇಂದ್ರ ಸಮಿತಿ ಸದಸ್ಯ ಖತರ್ ಬಾವ, ಇನೋಳಿ ಮಸೀದಿಯ ಕೋಶಾಧಿಕಾರಿ ಮುಹಮ್ಮದ್ ಶಬೀರ್, ಜಾಮಿಯಾ ಮುಬಾರಕ್ ಮಸೀದಿಯ ಅಧ್ಯಕ್ಷ ಅಬ್ದುಲ್ ಖಾದರ್ ಕೆಳಗಿನಕೆರೆ, ಗೌರವಾಧ್ಯಕ್ಷ ಐ.ಹುಸೈನ್ ಕಡವು, ಜತೆಕಾರ್ಯದರ್ಶಿಗಳಾದ ಅನ್ಸಾರ್ ಮುಕ್ರಿ, ಅಕ್ರಮ್ ಇನೋಳಿ, ಇನೋಳಿ ಬಿ'ಸೈಟ್ ಹಿದಾಯತುಲ್ ಇಸ್ಲಾಂ ಮದರಸದ ಅಧ್ಯಕ್ಷ ಟಿ.ಎಚ್.ನಝೀರ್, ಉಪಾಧ್ಯಕ್ಷ ಅಬ್ದುಲ್ ಹಮೀದ್ ಉಂಞ ದಿಡಿಂಜ, ಪ್ರಧಾನ ಕಾರ್ಯದರ್ಶಿ ಹುಸೈನ್ ಬಾವು, ಇನೋಳಿ ಹಿದಾಯತುಲ್ ಇಸ್ಲಾಂ ಮದರಸದ ಸದರ್ ಮುಅಲ್ಲಿಂ ಅಬ್ದುಲ್ ಹಮೀದ್ ಅಝ್ಹರಿ, ಮುಅಲ್ಲಿಂ ಅಬ್ದುಲ್ ಜಬ್ಬಾರ್ ದಾರಿಮಿ, ಮುಅದ್ದೀನ್ ಅಹ್ಮದ್ ಕುಂಞಿ ಮುಸ್ಲಿಯಾರ್, ಮಿಸ್ಬಾಹುಲ್ ಹುದಾ ಯಂಗ್ ಮೆನ್ಸ್ ಅಸೋಸಿಯೇಷನ್ ಅಧ್ಯಕ್ಷ ಲತೀಫ್ ಮೊದಲಾದವರು ಉಪಸ್ಥಿತರಿದ್ದರು. ಬಿ'ಸೈಟ್ ಮದರಸದ ಸದರ್ ಮುಅಲ್ಲಿಂ ಡಿ.ಐ.ಅಶ್ರಫ್ ಮುಸ್ಲಿಯಾರ್ ಕಾರ್ಯಕ್ರಮ ನಿರ್ವಹಿಸಿದರು.