ಮಂಗಳೂರು, ನ.18(Daijiworld News/SS): ಮೂಡುಬಿದಿರೆಯ ಕರಿಂಜೆ ಕ್ಷೇತ್ರದಲ್ಲಿ 2020ರ ಫೆಬ್ರವರಿ 8ರಿಂದ 18ರವರೆಗೆ ಜರುಗಲಿರುವ ನಾಗಮಂಡಲ ಮತ್ತು ಬ್ರಹ್ಮಕಲಶೋತ್ಸವದ ಕುರಿತ ಪೂರ್ವ ಸಿದ್ಧತಾ ಸಭೆಯು ಮಂಗಳೂರಿನ ಬಂಗ್ರಕೂಳೂರಿನಲ್ಲಿರುವ ಮಡಿವಾಳ ಸಭಾಭವನದಲ್ಲಿ ಕರಿಂಜೆ ಶ್ರೀ ಮುಕ್ತಾನಂದ ಸ್ವಾಮೀಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ಜರುಗಿತು.
ಈ ಸಭೆಯಲ್ಲಿ ಮಾತನಾಡಿದ ಕರಿಂಜೆ ಸ್ವಾಮೀಜಿ, ಎಲ್ಲಾ ಸಮಾಜದವರ ಬೆಂಬಲ ಮತ್ತು ಸಹಭಾಗಿತ್ವದೊಂದಿಗೆ ಕಾರ್ಯಕ್ರಮವನ್ನು ಶ್ರದ್ಧಾ ಭಕ್ತಿಯಿಂದ, ಸಂಭ್ರಮದೊಂದಿಗೆ ನಡೆಸಲು ಸಿದ್ಧತೆ ನಡೆದಿದೆ. ಮಡಿವಾಳ ಸಮಾಜವು ಈ ಪುಣ್ಯ ಕಾರ್ಯಕ್ಕೆ ಭಾಗಿಯಾಗಿ ಯಶಸ್ವಿಯಾಗಿ ಕಾರ್ಯಕ್ರಮ ನೆರವೇರುವಂತೆ ಸಹಕರಿಸಬೇಕು ಎಂದು ಕೋರಿದರು.
ನಾಗಮಂಡಲ, ಬ್ರಹ್ಮಕಲಶೋತ್ಸವದ ಬಗ್ಗೆ ಮಾಹಿತಿ ನೀಡಿದ ಸ್ವಾಮೀಜಿ, ಅಷ್ಟಪವಿತ್ರ ನಾಗಮಂಡಲದ ಚಪ್ಪರ ಮುಹೂರ್ತವನ್ನು ಈಗಾಗಲೇ ನೆರವೇರಿಸಲಾಗಿದೆ. ಇದರಲ್ಲಿ ಹಲವು ಗಣ್ಯರು ಪಾಲ್ಗೊಂಡಿದ್ದರು. ಎಲ್ಲಾ ಸಮಾಜದೊಂದಿಗೆ ನಮ್ಮ ಸಮಾಜವೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು. ಇನ್ನುಳಿದ 60 ದಿನಗಳಲ್ಲಿ ಉಳಿದ ಕಾರ್ಯಕ್ರಮಗಳು ವೇಗ ಪಡೆದುಕೊಳ್ಳಬೇಕಾಗಿದೆ. ಪ್ರತಿಯೊಬ್ಬರು ಈ ಕಾರ್ಯಕ್ರಮದಲ್ಲಿ ಶ್ರಮದಾನದ ಮೂಲಕ ಪಾಲ್ಗೊಳ್ಳಬೇಕೆನ್ನುವುದು ನನ್ನ ಆಶಯವಾಗಿದೆ. ಜೊತೆಗೆ ಪ್ರತಿಯೊಬ್ಬರಿಗೂ ಆಮಂತ್ರಣವನ್ನು ಮನೆ ಮನೆಗಳಿಗೆ ಮುಟ್ಟಿಸುವ ಕೆಲಸ ಮಾಡಬೇಕಾಗಿದೆ ಎಂದು ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷ ಪ್ರಕಾಶ್ ಬಿ ಎನ್, ಕಾರ್ಯದರ್ಶಿ ಭಾಸ್ಕರ್ ಬೇಕಲ್, ಮೋಹನ್ ಅಳಪೆ, ಅಶೋಕ್ ಪೊಳಲಿ, ಸುಧಾಕರ ಸಾಲ್ಯಾನ್, ಲೀಲಾ ಎಚ್ ನಾರಾಯಣ, ಮೋನಪ್ಪ ಬಿಜೈ, ಸುಜಾತಾ ಪ್ರದೀಪ್, ತನಜಾ ಪ್ರಕಾಶ್, ಗುಲಾಬಿ, ರಜಕ ಸಂಘದ ಅಧ್ಯಕ್ಷ ಸಂಪತ್ ಕೊಂಡಾಣ, ತಾಲೂಕು ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.