ಮಂಗಳೂರು, ನ 18 (Dijiworld News/MB): ಸಾದಾ ಟ್ರೋಲ್ ಆಗುತ್ತಿರುವ ಪಂಪ್ ವೆಲ್ ಫ್ಲೈ ಓವರ್ ನ ನಿಧಾನಗತಿಯ ಕಾಮಗಾರಿಯನ್ನು ಶೀಘ್ರ ಮುಗಿಸುವಂತೆ ಸಂಸದರ ಗಮನ ಸೆಳೆಯುವ ನಿಟ್ಟಿನಲ್ಲಿ ಸಂಘಟನೆಯೊಂದು ವಿಶಿಷ್ಟ ಕ್ಯಾಂಪೇನ್ ಒಂದನ್ನು ಆರಂಭಿಸಿದೆ. ಅದುವೇ ಗಾಳಿಪಟ ಕ್ಯಾಂಪೇನ್.
ಮಂಗಳೂರು ಸಿವಿಕ್ ಗ್ರೂಪ್ ನೇತೃತ್ವದಲ್ಲಿ ನವೆಂಬರ್ 24 ರಂದು ಸಂಜೆ 5 ಗಂಟೆಯಿಂದ ಪಂಪ್ ವೆಲ್ ಮೇಲ್ಸೇತುವೆ ಮೇಲೆ ಗಾಳಿಪಟ ಹಾರಿಸುವ ಕಾರ್ಯಕ್ರಮ ನಡೆಯಲಿದೆ.
ಈ ಸಂದರ್ಭದಲ್ಲಿ ಸಾರ್ವಜನಿಕರು ತಮ್ಮ ವಿವಿಧ ವಿಭಿನ್ನ ಗಾಳಿಪಟಗಳನ್ನು ತಂದು ಮೇಲ್ಸೇತುವೆಯ ಮೇಲೆ ನಿಂತು ಹಾರಿಸಬಹುದು ಮತ್ತು ಇತರೆ ಸಂಘಟನೆಗಳು ಇದರಲ್ಲಿ ಸೇರಿಕೊಳ್ಳಬಹುದು ಎಂದು ಸಿವಿಕ್ ಗ್ರೂಪ್ ತಿಳಿಸಿದೆ.
'ಸಂಸದರು ಈಗಾಗಲೇ ಮೇಲ್ಸೇತುವೆಯ ಕಾಮಗಾರಿ ಡಿಸೆಂಬರ್ ನಲ್ಲಿ ಪೂರ್ತಿಯಾಗುವುದೆಂದು ಜನವರಿ ತಿಂಗಳಲ್ಲಿ ಉದ್ಘಾಟನೆ ಮಾಡಲಾಗುವುದೆಂದು ತಿಳಿಸಿದ್ದಾರೆ. ಆದರೆ ಇಂಜಿನಿಯರ್ ಗಳ ಪ್ರಕಾರ ಇದು ಸಾಧ್ಯವಿಲ್ಲ. ಆದ್ದರಿಂದ ಜನಪ್ರತಿನಿಧಿಗಳನ್ನು ಅಣಕಿಸುವ ನಿಟ್ಟಿನಲ್ಲಿ ಈ ವಿಭಿನ್ನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ' ಎಂದು ಎಂಸಿಸಿ ಸಿವಿಕ್ ಗ್ರೂಪ್ ನ ಸದಸ್ಯ ರೂಪನ್ ಫರ್ನಾಂಡಿಸ್ ಹೇಳಿದ್ದಾರೆ.