ಕಾರ್ಕಳ, ನ 17 (DaijiworldNews/SM): ಭಾರತ ರತ್ನ ಸಂವಿಧಾನ ಶಿಲ್ಪಿಡಾ. ಬಿ.ಆರ್. ಅಂಬೇಡ್ಕರ್ ಅವರ ಪಾಂಡಿತ್ಯ, ಅವರು ಏನು ಎಂಬುದರ ಬಗ್ಗೆ ಇಡೀ ಪ್ರಪಂಚಕ್ಕೆ ಗೊತ್ತಿದ್ದರೂ ಕೇಂದ್ರ ಸರ್ಕಾರ ಮತ್ತು ಕರ್ನಾಟಕದ ಅದೇ ಪಕ್ಷದ ಸರಕಾರದ ಶಿಕ್ಷಣ ಸಚಿವರಿಗೂ ಹಾಗೂ ಐಎಎಸ್ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಅಧಿಕಾರಿಗೆ ತಿಳಿಯದೆ ಅಂಬೇಡ್ಕರವರು ಸವಿಧಾನ ಬರೆದಿಲ್ಲ. ಅವರು ಸಂವಿಧಾನ ಶಿಲ್ಪಿ ಅಲ್ಲ ಎಂಬುದರ ಬಗ್ಗೆ ಸುಳ್ಳು ಕಥೆಗಳನ್ನು ಹುಟ್ಟು ಹಾಕಿ ಶಾಲಾ ಮಕ್ಕಳ ತಲೆಗೆ ತುಂಬಿಸುವ ಕೆಲಸ ಮಾಡುತ್ತಿರುವುದು ಖಂಡನೀಯವಾಗಿದೆ. ಘಟನೆಗೆ ಕಾರಣವಾದ ಅಧಿಕಾರಿಗಳನ್ನು ಕೂಡಲೇ ವಜಾಗೊಳಿಸಬೇಕೆಂದು ಶಾಮರಾಜ ಬಿರ್ತಿ ಸರಕಾರವನ್ನು ಆಗ್ರಹಿಸಿದ್ದಾರೆ.
ಕರ್ನಾಟಕ ಸರಕಾರದ ಶಿಕ್ಷಣ ಇಲಾಖೆಯಿಂದ ಬಿಡುಗಡೆ ಮಾಡಲಾಗಿರುವ ಸುತ್ತೋಲೆ ಹಾಗೂ ಕೈಪಿಡಿಯಲ್ಲಿ ಅಂಬೇಡ್ಕರ್ ಅವರನ್ನು ಅವಹೇಳನ ಮಾಡಿರುವ ಬಗ್ಗೆ ಮಾಹಿತಿಗಳಿದ್ದು ಅದನ್ನು ಹಿಂತೆಗೆದು ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಜರಗಿಸುವ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿಯು ಕಾರ್ಕಳ ತಾಲೂಕು ಕಚೇರಿಯ ಅಂಬೇಡ್ಕರ್ ಪ್ರತಿಮೆ ಮುಂಭಾಗದಲ್ಲಿ ಆಯೋಜಿಸಿ ಸಾಂಕೇತಿಕ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸಂಘಟನೆಯ ಮುಖಂಡ ಸುಂದರ ಮಾಸ್ಟರ್ ಮಾತನಾಡಿ, ಮೂಲಭೂತ ವಾದಿಗಳು ಭಾರತದ ಇತಿಹಾಸವನ್ನು ಬದಲಾಯಿಸುವ ಕಾರ್ಯ ನಡೆಸುತ್ತಿರುವ ಹಿನ್ನಲೆಯಲ್ಲಿ ಅಂಬೇಡ್ಕರ್ ಸಂವಿಧಾನ ಬರೆದಿಲ್ಲ ಗಾಂಧೀಜಿ ರಾಷ್ಟ್ರಪಿತ ಅಲ್ಲ. ಟಿಪ್ಪು ಸುಲ್ತಾನ್ ಸ್ವಾತಂತ್ರ ಹೋರಾಟಗಾರನಲ್ಲ ಎಂದು ಮುಂದಿನ ಪೀಳಿಗೆಗೆ ತಿಳಿಸುವ ಪ್ರಯತ್ನ ನಡೆಯುತ್ತಿದೆ. ಇದು ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ತೋರಿದ ಅಗೌರವವಾಗಿದೆ. ಇದನ್ನು ದಲಿತ ಸಂಘರ್ಷ ಸಮಿತಿ ಬಲವಾಗಿ ಖಂಡಿಸುತ್ತದೆ ಎಂದರು.
ನಾವು ಸಂವಿಧಾನ ಬದಲಾವಣೆಗಾಗಿ ರಾಜಕೀಯಕ್ಕೆ ಬಂದಿರುವುದು. ತಮ್ಮ ಮೂಗಿನ ನೇರಕ್ಕೆ ಇತಿಹಾಸ ರಚಿಸುವುದು ಇವರ ಕೆಲಸವಾಗಿದೆ. ನಾವು ಇವರ ಧೋರಣೆಯನ್ನು ಖಂಡಿಸುತ್ತೇವೆ ಎಂದರು.