ಕುಂದಾಪುರ, ನ 16 (Daijiworld News/MSP): ಶಾಲೆಗೆಂದು ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿಯೊಬ್ಬನಿಗೆ ದುಷ್ಕರ್ಮಿಗಳ ತಂಡವೊಂದು ರಾಸಾಯನಿಕ ಸ್ಪ್ರೇ ಮಾಡಿ ಪ್ರಜ್ಞೆ ತಪ್ಪಿಸಿ ಬಳಿಕ ಅಲ್ಲಿಂದ ತಪ್ಪಿಸಿಕೊಂಡ ಘಟನೆ ಕುಂದಾಪುರ ತಾಲೂಕಿನ ಬೆಳ್ವೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೊಮ್ಮೊಲ ರಸ್ತೆಯಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.
ಬೆಳ್ವ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಬೆಳ್ವೆ ಉದಯಕುಮಾರ್ ಪೂಜಾರಿ ಎಂಬುವರ ಅಣ್ಣನ ಮಗ 5ನೇ ತರಗತಿ ವಿದ್ಯಾರ್ಥಿ ಹರ್ಷಿತ್(10) ಎಂಬಾತನೇ ದುಷ್ಕರ್ಮಿಗಳ ಕೃತ್ಯಕ್ಕೆ ಒಳಗಾದವ ಎಂದು ತಿಳಿದು ಬಂದಿದೆ.
ಶನಿವಾರ ಬೆಳಿಗ್ಗೆ ಹರ್ಷಿತ್ ಎಂದಿನಂತೆ ಮನೆಯಿಂದ ಶಾಲೆಗೆ ನಡೆದುಕೊಂಡು ಬರುತ್ತಿದ್ದ. ಇದೇ ಸಂದರ್ಭ ಪ್ರದೀಪ್ ಶೆಟ್ಟಿ ಎಂಬುವರ ಮನೆ ಸಮೀಪ ಆರೋಗ್ಯ ಕೇಂದ್ರಕ್ಕೆ ಎರಡು ಮಾರು ದೂರದಲ್ಲಿ ಒಂದು ನೀಲಿ ಬಣ್ಣದ ಓಮ್ನಿ ಕಾರು ನಿಂತಿತ್ತು ಎನ್ನಲಾಗಿದೆ. ಹರ್ಷಿತ್ ಅಲ್ಲಿ ಬರುತ್ತಿದ್ದಂತೆ ಓಮ್ನಿಯಲ್ಲಿದ್ದವರು ಬಾ ನಿನ್ನನ್ನು ಶಾಲೆಗೆ ಬಿಡುತ್ತೇವೆ ಎಂದಿದ್ದರೆನ್ನಲಾಗಿದೆ. ಆಧರೆ ಯಾರ ವಾಹನದಲ್ಲಿಯೂ ಹೋಗದೇ ಇದ್ದ ಹರ್ಷಿತ್ ಅವರ ಬೇಡಿಕೆಗೆ ಕ್ಯಾರೇ ಎನ್ನದೇ ಮುಂದಕ್ಕೆ ಬಂದಿದ್ದು, ತಕ್ಷಣ ಕಾರಿನಲ್ಲಿದ್ದವರು ವಾಹನವನ್ನು ತಿರುಗಿಸಿಕೊಂಡು ಬಂದಿದ್ದಾರೆ ಎನ್ನಲಾಗಿದೆ. ವಿದ್ಯಾರ್ಥಿಯ ಬಳಿಗೆ ಬರುತ್ತಿದ್ದಂತೆ ಯಾವುದೋ ರಾಸಾಯನಿಕವನ್ನು ಮೂಗಿಗೆ ಸ್ಪ್ರೇ ಮಾಡಿದ್ದು ಬಾಲಕನಿಗೆ ಗೊತ್ತಾಗಿದೆ. ತಕ್ಷಣ ಪ್ರಜ್ಞೆ ಕಳೆದುಕೊಂಡ ಹರ್ಷಿತ್ ರಸ್ತೆಯಲ್ಲಿಯೇ ಬಿದ್ದಿದ್ದು, ಅದೇ ಸಂದರ್ಭ ಯಾರೋ ಬಂದ ಕಾರಣ ಓಮ್ನಿಯಲ್ಲಿದ್ದ ದುಷ್ಕರ್ಮಿಗಳು ಪಲಾಯನ ಮಾಡಿದ್ದಾರೆ. ಬಳಿಕ ಸ್ಥಳೀಯರು ಸೇರಿ ಆತನನ್ನು ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಶಂಕರನಾರಾಯಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೆಬ್ರಿ ಆಸ್ಪತ್ರೆಯಲ್ಲಿ ಬಾಲಕನಿಗೆ ಚಿಕಿತ್ಸೆ ನೀಡಿ ಮೂಗಿಗೆ ಸಿಂಪಡಿಸಿದ ಸ್ಪ್ರೇ ರಾಸಾಯನಿಕವನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.