ಬೆಳ್ಮಣ್, ನ 16 (Daijiworld News/MSP): ಬೆಳ್ಳಂಬೆಳಗ್ಗೆ ಆ ಮನೆಯವರು ಬೆಚ್ಚಿಬಿದ್ದಿದ್ದರು. ಯಾಕೆಂದರೆ ಮನೆಯ ಮುಂದಿದ್ದ ತೋಟದ ತೆಂಗಿನ ಮರದಲ್ಲಿ ಬಿಳಿ ಬಣ್ಣದ ಪ್ಯಾರಾಚೂಟ್ ನಂತ ಸಾಧನ ಸಿಲುಕಿಕೊಂಡಿತ್ತು ಅದರ ಕೆಳಗೆ ಉಪಕರಣದಂತಹ ಪೆಟ್ಟಿಗೆ.. ಇದನ್ನು ನೋಡಿ ಕಂಗಾಲದ ಮನೆಯವರು ಬಾಂಬ್ ಇರಬಹುದು ಎಂದು ಭಯಪಟ್ಟು ಏಕಾಏಕಿ ಪೊಲೀಸರಿಗೆ ಪೋನಾಯಿಸಿದರು.ಇದರ ಬೆನ್ನಲ್ಲೇ ಚಿಪ್ ಒಳಗೊಂಡ ಸಣ್ಣ ಉಪಕರಣದ ಜೊತೆ ದೊಡ್ಡ ಗಾತ್ರದ ಬಲೂನೊಂದು ಪತ್ತೆಯಾದ ಸುದ್ದಿ ಊರೆಲ್ಲಾ ಹಬ್ಬಿ ಗ್ರಾಮಸ್ಥರು ಭಯಬೀತರಾಗಿದ್ದರು.
" ಪ್ಯಾರಾಚೂಟ್ ರೀತಿಯ ವಸ್ತು ನಮ್ಮ ಮನೆ ಬಳಿ ಕಂಡುಬಂದಿದೆ..ಬಾಂಬ್ ನಂತಹ ಸಿಡಿಯುವ ವಸ್ತು ಇರಬಹುದಾ ಏನೋ ಗೊತ್ತಿಲ್ಲ" ಎಂಬ ಮನೆಯವರ ಕರೆ ಕೇಳಿ ಪೊಲೀಸರು ಅಲ್ಲಿಗೆ ಧಾವಿಸಿದ್ದರು. ಇಷ್ಟೇಲ್ಲಾ ನಡೆದಿದ್ದು, ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೋಳ ಗ್ರಾಮದ ನಿವಾಸಿ ಕಿಶೋರ್ ಮೂಲ್ಯ ಅವರ ಮನೆಯಲ್ಲಿ.. ಮನೆಯವರ ಗಾಬರಿ ಕರೆಗೆ ಪೊಲೀಸರು, ಗ್ರಾಮ ಕರಣಿಕ ಸೇರಿ ಹಲವರು ಬಂದಿದ್ದರು.
ಪೊಲೀಸರು ನಿಧಾನಕ್ಕೆ ಪರಿಶೀಲಿಸಿದಾಗ "ಆರ್ ಎಸ್ ಜಿ-20 ಎ ಜಿಪಿಎಸ್ ರೇಡಿಯೋ ಅನ್ವೇಷಕ" ಎಂದು ತಿಳಿದುಬಂತು. ಇದು ಹವಾಮಾನ ಸಂಬಂಧಿ ಮಾಹಿತಿ ಸಂಗ್ರಹಕ ಉಪಕರಣವಾಗಿದ್ದು, ಮಂಗಳೂರಿನ ಶಕ್ತಿನಗರದಲ್ಲಿರುವ ಕೇಂದ್ರದಿಂದ ಹಾರಿಬಿಡಲಾಗುತ್ತದೆ. ಪ್ರತಿನಿತ್ಯವು 4.30ಕ್ಕೆ ಈ ಉಪಕರಣ ಅಗಸಕ್ಕೆ ಕಳುಹಿಸಲಾಗುತ್ತದೆ . ವಾತಾವರಣ ಏರುಪೇರು, ಹವಾಮಾನ ವೈಪರೀತ್ಯ ಸಹಿತ ಹವಾಮಾನಕ್ಕೆ ಸಂಬಂಧಿಸಿದ ನಿಖರ ಮಾಹಿತಿ - ಮುನ್ಸೂಚನೆಯನ್ನು ಪಡೆದುಕೊಳ್ಳಲಾಗುತ್ತದೆ. ಕೊರಿಯಾ ನಿರ್ಮಿತವಾಗಿರುವ ಈ ಉಪಕರಣ ಹೆಚ್ಚಾಗಿ ನಿರ್ಜನ ಪ್ರದೇಶ ಅಥವಾ ಸಮುದ್ರದಲ್ಲಿ ಪತನವಾಗುತ್ತದೆ,ಕೆಲವೊಮ್ಮೆ ಮೇಲ್ಮೈ ಗಾಳಿ ಬಲವಾಗಿ ಬೀಸಿದರೆ ದಿಕ್ಕು ತಪ್ಪಿ ಅಪರೂಪ ಎಂಬಂತೆ ಜನವಸತಿ ಪ್ರದೇಶದಲ್ಲಿ ಬೀಳುತ್ತವೆ.
ಕೊನೆಗೂ ಬಾಂಬ್ ಅಥವಾ ಇನ್ಯಾವುದೋ ಭಯಪಡಬೇಕಾದ ಸಾಧನವಲ್ಲ, ಇದೊಂದು ಹವಾಮಾನ ಮಾಹಿತಿ ಸಂಗ್ರಹ ಯಂತ್ರ ಎಂದು ತಿಳಿದು ಮನೆಯವರ ಎಲ್ಲರೂ ನಿಟ್ಟುಸಿರುಬಿಟ್ಟರು..