ಮಂಗಳೂರು, ನ.16(Daijiworld News/SS): ವೇದಿಕೆಯಲ್ಲಿ ಎಲ್ಲರೂ ಒಟ್ಟಿಗೆ ಇದ್ದು ಬಳಿಕ ದೂರವಾಗುವುದು ಸಮಾಜದ ದುರಂತ. ಜವಾಬ್ದಾರಿರಹಿತ, ಪರಸ್ಪರ ಕಿತ್ತಾಟದಿಂದ ಇಂತಹ ದುರಂತ ನಡೆಯುತ್ತಿದೆ. ಆದರೆ ಹರೇಕಳ ಗ್ರಾಮಸ್ಥರು ದೈವ-ದೇವರ ಸಂಕಲ್ಪದಂತೆ ಒಂದಾಗುವಂತಾಗಿದೆ ಎಂದು ಶ್ರೀ ಕ್ಷೇತ್ರದ ತಂತ್ರಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ನುಡಿದರು.
ಹರೇಕಳದ ಸಂಪಿಗೆದಡಿಯಲ್ಲಿ ಪುನರ್ನಿರ್ಮಾಣಗೊಳ್ಳಲಿರುವ ಶ್ರೀ ಅರ್ಧನಾರೀಶ್ವರ ದೇವಸ್ಥಾನಕ್ಕೆ ಶಿಲಾನ್ಯಾಸಗೈದು ಮಾತನಾಡಿದರು. ನಮ್ಮ ಮಣ್ಣನ್ನು ಎಷ್ಟು ಅಕ್ರಮಿಸಿದರೂ ಸಂಸ್ಕಾರ ಅಳಿಸಲು ಸಾಧ್ಯವಾಗಿಲ್ಲ. ದೇವರು ಕೇವಲ ಹೆಸರು, ಧರ್ಮ ಪುಸ್ತಕಕ್ಕೆ ಸೀಮಿತಗೊಳಿಸಿದಾಗ ಮನುಷ್ಯ ಅಧೋಗತಿ ತಲುಪುತ್ತಾನೆ. ಸನಾತನ ಸಂಸ್ಕೃತಿ ಇದುವರೆಗೆ ಉಳಿದಿದ್ದರೆ ಅದರ ಹಿಂದೆ ಸರ್ವರ ಕೂಡುವಿಕೆ ಪ್ರಮುಖ ಪಾತ್ರ ವಹಿಸಿದೆ. ಇಂತಹ ಕೂಡುವಿಕೆ ದೇವಸ್ಥಾನಗಳಿಂದ ಸಾಧ್ಯವಾಗಿದೆ. ಹಿಂದೆ ಧಾರ್ಮಿಕ ಕೇಂದ್ರಗಳಲ್ಲಿ ಪರಸ್ಪರ ಕೂಡುವಿಕೆಯಿಂದ ಸಿಗುತ್ತಿದ್ದ ಕೌಶಲ್ಯ ತರಬೇತಿ ಇಂದು ಸರ್ಕಾರ ನೀಡುವಂತಾಗಿದೆ ಎಂದು ಹೇಳಿದರು.
ಈ ವೇಳೆ ಮಾತನಾಡಿದ ಶಾಸಕ ಯು.ಟಿ.ಖಾದರ್, ಪ್ರದೇಶ ಅಭಿವೃದ್ಧಿಯಾಗಬೇಕಾದರೆ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಯಾಗಬೇಕಿರುವುದು ಮುಖ್ಯ. ಕ್ಷೇತ್ರ ವ್ಯಾಪ್ತಿಯಲ್ಲಿ ಎಲ್ಲಾ ಧಾರ್ಮಿಕ ಕೇಂದ್ರಗಳಿಗೆ ಮೂಲ ಸೌಕರ್ಯ ಕಲ್ಪಿಸಲಾಗಿದೆ. ಇಂಜಿನಿಯರ್'ಗಳು ನಿರಾಕರಿಸಿದ್ದರೂ ಸಂಪಿಗೆದಡಿಗೆ ಉತ್ತಮ ರಸ್ತೆ ನಿರ್ಮಿಸಲಾಗಿದೆ. ಕ್ಷೇತ್ರದ ವಿವಿಧ ಭಾಗಗಳಲ್ಲಿರುವ ದೇವಸ್ಥಾನ ಹಾಗೂ ಸಣ್ಣ ಧಾರ್ಮಿಕ ಕೇಂದ್ರಗಳಿಗೆ ಸಂಪರ್ಕ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ಗುತ್ತಿಮೊಗರು ರಸ್ತೆ ಶೇ.25ರಷ್ಟು ಕಾಮಗಾರಿ ಮಾತ್ರ ಬಾಕಿಯಿದ್ದು ಹಲವಾರು ವರ್ಷಗಳಿಂದ ಯಾರಿಂದಲೂ ಪೂರ್ಣಗೊಳಿಸಲು ಸಾಧ್ಯವಾಗದಿದ್ದು, ತಾನೇ ಆ ಕೆಲಸ ಮಾಡಿಸುವುದಾಗಿ ತಿಳಿಸಿದರು.
ನಿರ್ಮಾಣ ಸಮಿತಿಯ ಗೌರವಾಧ್ಯಕ್ಷ ಟಿ.ಆರ್.ಪೂಂಜಾ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಿರ್ಮಾಣ ಸಮಿತಿ ಅಧ್ಯಕ್ಷ ರಾಜೀವ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಗ್ರಾಮದ ಪುರೋಹಿತ ಶ್ರೀನಿವಾಸ ಕಲ್ಲೂರಾಯ, ಹಿರಿಯರಾದ ರಘುರಾಮ ಪೂಂಜ, ಕಾರ್ಯಾಧ್ಯಕ್ಷ ದೆಬ್ಬೇಲಿಗುತ್ತು ಮೋಹನ್ ದಾಸ್ ರೈ, ವಿಖ್ಯಾತ್ ರೈ ಹರೇಕಳಗುತ್ತು, ಕೋಶಾಧಿಕಾರಿ ಸದಾಶಿವ ಸಾಮಾನಿ, ಉಪಾಧ್ಯಕ್ಷರಾದ ಮಹಾಬಲ ಹೆಗ್ಡೆ ದೆಬ್ಬೇಲಿಗುತ್ತು, ಊಟೋಪಚಾರ ಉಸ್ತುವಾರಿ ದೇವರಾಜ್ ರೈ, ಮನೋಹರ ಶೆಟ್ಟಿ ಸಂಪಿಗೆದಡಿಗುತ್ತು, ಭಜನಾ ಮಂಡಳಿ ಅಧ್ಯಕ್ಷ ದಯಾನಂದ ಸ್ಥಳದಾನಿಗಳಾದ ವಿಶ್ವನಾಥ ರೈ ಹಾಗೂ ಆನಂದ ಚೌಟ ಮೊದಲಾದವರು ಉಪಸ್ಥಿತರಿದ್ದರು. ಕ್ಷೇತ್ರ ನಿರ್ಮಾಣ ಸಮಿತಿಯ ಕಾರ್ಯದರ್ಶಿ ರವೀಂದ್ರ ಶೆಟ್ಟಿ ಉಳಿದೊಟ್ಟು ಸ್ವಾಗತಿಸಿದರು. ರವಿರಾಜ್ ರೈ ಎಲ್ಯಾರ್ ವಂದಿಸಿದರು. ವಾಮನ್ ರಾಜ್ ಪಾವೂರು ಕಾರ್ಯಕ್ರಮ ನಿರೂಪಿಸಿದರು.