ಮಂಗಳೂರು, ನ 14(Daijiworld News/MSP): ಒಂದೇ ಬಾರಿ ಐದು ಮರಿ ಹಾಕಿ ಪಿಲಿಕುಳ ನಿಸರ್ಗಧಾಮದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಅಚ್ಚರಿ ಉಂಟುಮಾಡಿದ್ದ ಉದ್ಯಾನವನದ 'ರಾಣಿ' ಹುಲಿಯ ಮರಿಗಳ ವಾಸಕ್ಕಾಗಿ ಸುಂದರ ವಾಸಸ್ಥಳ ನಿರ್ಮಾಣವಾಗಲಿದೆ.!
ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿ ಎರಡು ತಿಂಗಳ ಹಿಂದೆಯಷ್ಟೇ ,ಹುಟ್ಟಿದ ಐದು ಹುಲಿ ಮರಿಗಳಿಗಾಗಿ ಪ್ರಾಣಿ ಸ್ನೇಹಿ ವಾಸದ ಸ್ಥಳ ನಿರ್ಮಾಣಕ್ಕಾಗಿ ಅಬುಧಾಬಿ ಉದ್ಯಮಿ ರಾಮದಾಸ್ ಕಾಮತ್ ಮತ್ತು ಅವರ ಪತ್ನಿ ಜಯಶ್ರೀ ಕಾಮತ್ 15 ಲಕ್ಷ ರೂ ದೇಣಿಗೆಯಾಗಿ ನೀಡಿದ್ದಾರೆ. ಇಷ್ಟು ಮಾತ್ರವಲ್ಲದೆ ಪಿಲಿಕುಳಕ್ಕೆ ಭೇಟಿ ನೀಡಿದ ಬಳಿಕ ಉದ್ಯಾನದ ಮತ್ತಷ್ಟು ಅಭಿವೃದ್ಧಿಗೆ ಹೆಚ್ಚಿನ ಆರ್ಥಿಕ ಸಹಾಯವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಜೈವಿಕ ಉದ್ಯಾನವನದ ನಿರ್ದೇಶಕ ಹೆಚ್.ಜೆ ಭಂಡಾರಿ ತಿಳಿದ್ದಾರೆ.
‘ರಾಣಿ’ ಹುಲಿಯ 5 ಮರಿಗಳಿಗೂ ಕಾಮತ್ ದಂಪತಿಗಳು ಸೂಚಿಸಿದಂತೆ ಹೆಸರಿಡಲು ಪಾರ್ಕ್ ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಪ್ರಸ್ತುತ ಪಿಲಿಕುಳದಲ್ಲಿ 5 ಮರಿಗಳು ಸೇರಿದಂತೆ 13 ಹುಲಿಗಳಿವೆ. ರಾಣಿಯನ್ನು 3 ವರ್ಷಗಳ ಹಿಂದೆ ಬೆಂಗಳೂರಿನ ಬನ್ನೇರುಘಟ್ಟದಿಂದ ತರಲಾಗಿತ್ತು. ಇದೀಗ ಎರಡು ತಿಂಗಳ ಹಿಂದೆಯಷ್ಟೇ ರಾಣಿಗೆ 5 ಮರಿಗಳು ಜನಿಸಿವೆ.