ಮಂಗಳೂರು, ನ 15(Daijiworld News/MB) : ಮಂಗಳೂರು ಮಹಾನಗರ ಪಾಲಿಕೆಯಲ್ಲೇ ಮೊದಲ ಬಾರಿಗೆ 60 ಕ್ಷೇತ್ರದಿಂದ 30 ಮಹಿಳೆಯರು ಪಾಲಿಕೆಗೆ ಪ್ರವೇಶ ಪಡೆದುಕೊಂಡಿದ್ದಾರೆ. ಮಹಿಳೆ ಪುರುಷರಷ್ಟೇ ಸಮಾನವಾಗಿ ಮಂಗಳೂರಿನ ಅಭಿವೃದ್ಧಿಗಾಗಿ ಕೆಲಸ ಮಾಡಲಿದ್ದಾರೆ.
ಸ್ಥಳೀಯ ಚುನಾವಣೆಯಲ್ಲಿ ಶೇ.50 ರಚ್ಟು ಮಹಿಳೆಯರಿಗೆ ಮೀಸಲಾತಿ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದ ನಂತರ ಇದೇ ಮೊದಲ ಬಾರಿಗೆ ಶೇ. 50 ಮಹಿಳೆಯರು ಜಯಗಳಿಸಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಯ 60 ವಾರ್ಡ್ಗಳಲ್ಲಿ ನಡೆದ ಚುನಾವಣೆಯಲ್ಲಿ 29 ವಾರ್ಡ್ಗಳು ಮಹಿಳೆಯರಿಗೆ ಮೀಸಲಾಗಿತ್ತು. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಎಲ್ಲಾ 29 ಕ್ಷೇತ್ರಗಳಲ್ಲಿ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರೆ, ಬಿಜೆಪಿ ಈ 29 ಮಹಿಳಾ ಅಭ್ಯರ್ಥಿಗಳಲ್ಲದೆ ಹೆಚ್ಚುವರಿ 2 ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ ನೀಡಿತ್ತು. ಅಷ್ಟು ಮಾತ್ರವಲ್ಲದೇ ಪಕ್ಷೇತರರಾಗಿ 82 ಮಹಿಳಾ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.
ಚುನಾವಣೆಯಲ್ಲಿ ಬಿಜೆಪಿಯಿಂದ ಒಟ್ಟು 31 ಮಹಿಳಾ ಸ್ಪರ್ಧಿಗಳಲ್ಲಿ 27 ಅಭ್ಯರ್ಥಿಗಳು ಜಯಶೀಲರಾಗಿದ್ದು, ಕಾಂಗ್ರೆಸ್ ನಿಂದ ಒಟ್ಟು 29 ಮಹಿಳಾ ಸ್ಪರ್ಧಿಗಳಲ್ಲಿ 2 ಅಭ್ಯರ್ಥಿಗಳು ಗೆಲುವು ಸಾದಿಸಿದ್ದಾರೆ. ಹಾಗೆಯೇ ಎಸ್ ಡಿ ಪಿ ಐ ನಿಂದ ಓರ್ವ ಮಹಿಳಾ ಅಭ್ಯರ್ಥಿ ಜಯ ಗಳಿಸಿದ್ದಾರೆ.
ಕಳೆದ ಚುನಾವಣೆಯಲ್ಲಿ ಒಟ್ಟು 22 ಅಭ್ಯರ್ಥಿಗಳು ಪಾಲಿಕೆಯಲ್ಲಿ ಸದಸ್ಯರಾಗಿದ್ದರು. ಆದರೆ ಈ ಬಾರಿ ಪಾಲಿಕೆಯಲ್ಲಿ ಶೇ. 50 ರಷ್ಟು ಮಹಿಳೆಯರು ಸದಸ್ಯರಾಗುವ ಮೂಲಕ ಪಾಲಿಕೆಯಲ್ಲಿ ಸಮಾನತೆಗೆ ನಾಂದಿ ಹಾಡಿದ್ದಾರೆ.