ಮಂಗಳೂರು, ನ 15(Daijiworld News/MB) : ಧರ್ಮದ ಹೆಸರಲ್ಲಿ ರಾಜಕಾರಣ ನಡೆಸುವ ಕರಾವಳಿಯಲ್ಲಿ ಮಹಾನಗರ ಪಾಲಿಕೆ ಚುನಾವಣೆ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದೆ. ಹಿಂದುತ್ವ ಪ್ರತಿಪಾದಕ, ಸಂಘಪರಿವಾರದ ರಾಜಕೀಯ ಪಕ್ಷವೆಂದೇ ಗುರುತಿಸಿಕೊಂಡ ಬಿಜೆಪಿ ಗೆ ವಾರ್ಡ್ ವೊಂದರಲ್ಲಿ ಧರ್ಮ ಭೇದ ತೋರದೆ ಅಭೂತಪೂರ್ವ ಬೆಂಬಲ ದೊರೆತಿದೆ.
ಮಂಗಳೂರು ಮಹಾನಗರ ಪಾಲಿಕೆಯ ವಾರ್ಡ್ ನಂಬರ್ 20 ರ ತಿರುವೈಲ್ ನಲ್ಲಿ ಯಾವುದೇ ಧರ್ಮ ಭೇದವಿಲ್ಲದೆ ಹಿಂದೂ, ಮುಸ್ಲಿಂ, ಕ್ರೈಸ್ತರು ಜೊತೆಯಾಗಿ ಬಿಜೆಪಿ ಅಭ್ಯರ್ಥಿಯ ಗೆಲುವನ್ನು ಸಂಭ್ರಮಿಸಿದ್ದಾರೆ. ಈ ಕೋಮು ಸೌಹರ್ದ ಸಂಭ್ರಮಾಚರಣೆಗೆ ಸಾಕ್ಷಿಯಾಗಿದ್ದು ಸಂಭ್ರಮಾಚರಣೆಯಲ್ಲಿ ರಾರಾಜಿಸುತ್ತಿದ್ದ ಕೇಸರಿ, ಬಿಳಿ, ಹಸಿರು ಧ್ವಜಗಳು. ಅಭ್ಯರ್ಥಿ ಗೆಲ್ಲುತ್ತಿದ್ದಂತೆ ಕಮಲ ಪಕ್ಷದ ಕೇಸರಿ ಧ್ವಜದ ಜೊತೆಗೆ ಮುಸ್ಲಿಮರ ಹಸಿರು ಪತಾಕೆ, ಕ್ರೈಸ್ತರ ಬಿಳಿ ಧ್ವಜವೂ ಜೊತೆಯಾಗಿ ತ್ರಿವರ್ಣದ ಬಣ್ಣ ಪಡೆದಿದೆ.
ಈ ಹಿಂದೆ ಈ ವಾರ್ಡ್ ನಲ್ಲಿ ಎರಡು ಬಾರಿ ಕಾರ್ಪೊರೇಟರ್ ಆಗಿದ್ದ ಬಿಜೆಪಿಯ ಹೇಮಲತಾ ರಘು ಸಾಲಿಯಾನ್ ಜಾತಿ, ಧರ್ಮ ಭೇದ ತೋರದೆ ಅಭಿವೃದ್ಧಿ ಕಾರ್ಯ ನಡೆಸಿದ್ದರು. ಅಲ್ಲದೇ ಈ ಬಾರಿ ಬಿಜೆಪಿಯಿಂದ ವಲಸೆ ಬಂದ ಪ್ರತಿಭಾ ರಾಜ್ ಕುಮಾರ್ ಶೆಟ್ಟಿ ಅವರಿಗೆ ಕಾಂಗ್ರೆಸ್ ಮಣೆ ಹಾಕಿರೋದಕ್ಕೆ ಪಕ್ಷದಲ್ಲೇ ಭಿನ್ನಮತ ಎದ್ದಿತ್ತು. ಅಲ್ಲದೇ ಕಾಂಗ್ರೆಸ್ ಬ್ಲಾಕ್ ಮಟ್ಟದ ನಾಯಕರೇ ಬಹಿರಂಗವಾಗಿ ಬಿಜೆಪಿ ಜೊತೆ ಸೇರಿದ್ದರು. ಆದ್ದರಿಂದ ಬಿಜೆಪಿ ಅಭ್ಯರ್ಥಿ ಹೇಮಲತಾ ಅವರಿಗೆ ಇಲ್ಲಿ ಅಭೂತಪೂರ್ವ ಗೆಲುವು ಸಿಕ್ಕಿದೆ.
ಕರಾವಳಿಯಲ್ಲಿ ಬಿಜೆಪಿಯಿಂದ ಸಮಾನ ಅಂತರ ಕಾಯ್ದುಕೊಳ್ಳುತ್ತಿದ್ದ ಮುಸ್ಲಿಮರು ಇಲ್ಲಿ ಬಿಜೆಪಿ ಜೊತೆಗೆ ಕೈ ಜೋಡಿಸಿದ್ದು ಅಚ್ಚರಿಯಾಗಿದ್ದು, ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದ್ದಾರೆ.