ಮಂಗಳೂರು, ನ 15 (Daijiworld News/MSP): ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಚುನಾವಣೆ ನಡೆದು 60 ವಾರ್ಡ್ ಗಳಲ್ಲಿ 44 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲು ಅಣಿಯಾಗಿದೆ.
ಬಿಜೆಪಿ ಪಾಲಿಕೆಯ ಗದ್ದುಗೆ ಏರುವುದು ಖಚಿತವಾಗುತ್ತಿದ್ದಂತೆ, ಪಾಲಿಕೆಯ ಮುಂದಿನ ಮೇಯರ್-ಉಪಮೇಯರ್ ಯಾರಾಗಲಿದ್ದಾರೆ ಎಂಬ ಕುತೂಹಲದ ರಾಜಕೀಯ ವಲಯದಲ್ಲಿ ಗರಿಕೆದರಿದೆ.
ಪಾಲಿಕೆಯ ಸದಸ್ಯ ಅಭ್ಯರ್ಥಿಗಳ ಮೀಸಲಾತಿ ಪ್ರಕಟಗೊಂಡ ಸ್ವಲ್ಪ ದಿನದಲ್ಲಿ ಮೇಯರ್ ಹಾಗೂ ಉಪ ಮೇಯರ್ ಮೀಸಲಾತಿಯನ್ನು ಸರಕಾರ ಪ್ರಕಟಿಸಿತ್ತು. ಹೀಗಾಗಿ ಅದರಂತೆ ಈ ಬಾರಿ ಮೇಯರ್ ಪದವಿ ಹಿಂದುಳಿದ ವರ್ಗ "ಎ" ಹಾಗೂ ಉಪಮೇಯರ್ ಸಾಮಾನ್ಯ ಮಹಿಳೆ ಮೀಸಲಾತಿಯಾಗಿದೆ. ಆದರೆ ಈ ಮೀಸಲಾತಿಯನ್ನು ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಪ್ರಕಟಗೊಂಡಿದ್ದು ಪ್ರಸ್ತುತ ರಾಜ್ಯದಲ್ಲಿ ಬಿಜೆಪಿ ಸರಕಾರ ಇರುವುದರಿಂದ ಮೇಯರ್-ಉಪಮೇಯರ್ ಮೀಸಲಾತಿ ಯಲ್ಲಿ ಮತ್ತೆ ಬದಲಾವಣೆಯಾಗಿ ಹೊಸ ಮೀಸಲಾತಿ ಪ್ರಕಟಗೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಒಂದು ವೇಳೆ ಈಗಾಗಲೇ ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಪ್ರಕಟಗೊಂಡ ಮೀಸಲಾತಿಯಂತೆ ಮೇಯರ್ - ಉಪಮೇಯರ್ ಆಯ್ಕೆ ನಡೆಯುವುದಾದರೆ ಹಿಂದುಳಿದ ವರ್ಗದ ಮೀಸಲಾತಿ ಇರುವ ಹತ್ತರಷ್ಟು ಬಿಜೆಪಿ ಸದಸ್ಯರು ಅರ್ಹರಾಗಿದ್ದಾರೆ. ಇದರಂತೆಯೇ ಮೇಯರ್ ಚುನಾವಣೆ ನಡೆದ್ರೆ ಅರ್ಹತೆ ಪಡೆಯುವ ಬಿಜೆಪಿಯ ಹತ್ತರಷ್ಟು ಸದಸ್ಯರೆಲ್ಲಾರೂ ಪ್ರಥಮ ಬಾರಿಗೆ ಪಾಲಿಕೆ ಪ್ರವೇಶಿಸಿಸುವರು ಆಗಿದ್ದಾರೆ ಎನ್ನುವುದು ವಿಶೇಷ.