ಉಡುಪಿ, ನ 14 (DaijiworldNews/SM): ಮಹಾ ನಗರಪಾಲಿಕೆಯ ಚುನಾವಣಾ ಫಲಿತಾಂಶ ನಾವು ನಿರೀಕ್ಷಿಸಿದ ರೀತಿಯಲ್ಲಿಯೇ ಬಂದಿದೆ ಎಂದು ಕರ್ನಾಟಕ ರಾಜ್ಯ ಬಂದರು ಹಾಗೂ ಮುಜರಾಯಿ ಮತ್ತು ದಕ್ಷಿಣಕನ್ನಡ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಕಾಪುವಿನಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮದೇ ಸರಕಾರ ಇರುವುದರಿಂದ ದಕ್ಷಿಣ ಕನ್ನಡಕ್ಕೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಹಾಗೂ ಬಾಕಿ ಇದ್ದ ಕಾಮಗಾರಿಗಳನ್ನು ಪೂರೈಸಿ ಜನರಿಗೆ ಬೇಕಾದ ಸವಲತ್ತುಗಳನ್ನು ನೀಡಲು ಶ್ರಮಿಸುತ್ತೇವೆ ಎಂದರು.
ಒಂದು ರಾಷ್ಟ್ರೀಯ ಪಕ್ಷ ಕಾಂಗ್ರೇಸ್ನ ಹೀನಾಯ ಸೋಲಿಗೆ ಕಾರಣವೇನು ಎಂಬ ಪ್ರಶ್ನೆಗೆ ಬೇರೆಯವರ ಸೋಲಿನ ಬಗ್ಗೆ ನಮಗೆ ಆಸಕ್ತಿಯಿಲ್ಲ. ಆದರೂ ಒಂದು ರಾಷ್ಟ್ರೀಯ ಪಕ್ಷವಾಗಿದ್ದುಕೊಂಡು ಚುನಾವಣೆ ಎದುರಿಸಲು ವಿಫಲವಾಗಿದೆ. ಕಾಂಗ್ರೆಸಿನ ಮಾಜಿ ಮುಖ್ಯಮಂತ್ರಿ ನಮ್ಮ ಬಗ್ಗೆ ಎನೇ ಟೀಕೆ ಮಾಡಿದರೂ ಮತದಾರರು ಅವರನ್ನು ತಿರಸ್ಕರಿಸಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆ ಬಿಜೆಪಿ ಪಾಲಾಗಲು ಮತದಾರರು ಆಶೀರ್ವಾದ ನೀಡಿದ್ದಾರೆ ಎಂದರು.
ಚುನಾವಣಾ ಪೂರ್ವದಲ್ಲಿ ನಮ್ಮ ಕಾರ್ಯಕರ್ತರು ಮನೆಮನೆಗೆ ಭೇಟಿ ನೀಡಿದಾಗ ಮತದಾರರು ನೀಡಿದ ಪ್ರತಿಕ್ರಿಯೆ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪನವರ ಸರ್ಕಾರದ ಸಾಧನೆ ಬಗ್ಗೆ ಅತ್ಯಂತ ಒಳ್ಳೆಯ ಭಾವನೆ ಮತ್ತು ಉತ್ಸಾಹದಿಂದ ಬಿಜೆಪಿ ಪರ ಮತ ಚಲಾಯಿಸಿದ್ದಾರೆ. ಮತ ನೀಡಿ ಗೆಲುವಿಗೆ ಸಹಕರಿಸಿದ ಮತದಾರರಿಗೆ ಹಾಗೂ ಸಂಪೂರ್ಣ ಸಹಕರಿಸಿದ ಕಾರ್ಯಕರ್ತರಿಗೆ ಮತ್ತು ಸ್ಥಳೀಯ ಶಾಸಕರಿಗೆ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರಿಗೆ ವಂದನೆ ಸಲ್ಲಿಸಿದ್ದಾರೆ.
ಅನರ್ಹ ಶಾಸಕರು ಈಗಾಗಲೇ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಚುನಾವಣೆಗೆ ಸ್ಪರ್ಧಿಸಲು ಸನ್ನದ್ದರಾಗಿದ್ದಾರೆ. ನಮ್ಮ ಪಕ್ಷದಿಂದ ನಾಮಪತ್ರಗಳನ್ನು ಅವರವರ ಕ್ಷೇತ್ರದಿಂದ ಸಲ್ಲಿಸಿದ್ದಾರೆ. ಈ ಉಪಚುನಾವಣೆ ಭಾರತೀಯ ಜನತಾ ಪಕ್ಷದ ಪ್ರತಿಷ್ಟೆಯ ಚುನಾವಣೆಯಾಗಿದ್ದು, ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.