ಕಾರ್ಕಳ, ನ 14 (Daijiworld News/MSP): ನಗರದ ಪ್ರಮುಖ ಯಾತ್ರಾಸ್ಥಳಗಳ ವೀಕ್ಷಣೆಗೆಂದು ಮಂಗಳೂರಿನಿಂದ ಬಂದಿದ್ದ ಯುವ ಜೋಡಿಗೆ ಪೊಲೀಸ್ ಎಂದು ನಂಬಿಸಿದ ವ್ಯಕ್ತಿಯೊಬ್ಬ ಬೆದರಿಸಿ ಮೂರು ಸಾವಿರ ರೂ. ಎಗರಿಸಿ ಘಟನೆಯೊಂದು ಕಾರ್ಕಳದ ಆನೆಕೆರೆ ಪರಿಸರದಲ್ಲಿ ನಡೆದಿದೆ.
ಒಂದೇ ಸಂಸ್ಥೆಯಲ್ಲಿ ದುಡಿಯುತ್ತಿದ್ದ ಸಹೋದ್ಯೋಗಿಗಳು ಬುಧವಾರ ಬೆಳಿಗ್ಗೆ ಕಾರ್ಕಳ ನಗರಕ್ಕೆ ಬಂದಿದ್ದರು. ಪ್ರಮುಖ ಯಾತ್ರಾಸ್ಥಳಗಳನ್ನು ವೀಕ್ಷಿಸಿ, ಮಧ್ಯಾಹ್ನದ ವೇಳೆಗೆ ಊಟ ಮುಗಿಸಿ ಆನೆಕೆರೆ ಪರಿಸರಕ್ಕೆ ತೆರಳಿ ಅಲ್ಲಿ ವಾಯುವಿಹಾರ ನಡೆಸಿ ಹಿಂತಿರುವ ಸಂದರ್ಭದಲ್ಲಿ ಸುಮಾರು 45 ವರ್ಷ ವಯಸ್ಸಿನ ವ್ಯಕ್ತಿಯೊಬ್ಬ ಅವರ ಬಳಿಗೆ ಬಂದು ತಾನು ’ಅಪರಾಧ ಪತ್ತೆ ದಳದ ಪೊಲೀಸ್’ ಎಂದು ಪರಿಚಯಿಸಿಕೊಂಡಿದ್ದನು.
ನಿಮ್ಮಂತ ಜೋಡಿಗಳ ವಿರುದ್ಧ ಹಲವು ಕೇಸುಗಳನ್ನು ಹಾಕಿರುವುದಾಗಿ ಎಂದು ಹೇಳಿದಲ್ಲದೇ, ಬೆರಳಿನಲ್ಲಿರುವ ಚಿನ್ನದ ಉಂಗುರವನ್ನು ತನಗೆ ನೀಡುವಂತೆ ಯುವತಿಗೆ ಒತ್ತಾಯ ಹಾಕಿದನು. ಅದಕ್ಕೆ ತಿರಸ್ಕರಿಸಿದ ಯುವತಿಗೆ ನಿಮ್ಮ ಮೇಲೂ ಕೇಸು ಹಾಕುತ್ತೇನೆ ಎಂದು "ನಕಲಿ ಪೊಲೀಸ್" ಇನ್ನಷ್ಟು ಬೆದರಿಕೆಯೊಡ್ಡಿ, ಯುವತಿಯ ಕೈಯಲ್ಲಿರುವ ಪರ್ಸ್ನು ಎಗರಿಸಲು ಮುಂದಾಗಿದ್ದನು.
ಆತನ ವರ್ತನೆಯಿಂದ ಬೆದರಿದ ಯುವತಿ ಪರ್ಸ್ನಲ್ಲಿ ಎಟಿಎಂ ಕಾರ್ಡ್ ಮಾತ್ರ ಇದೆ ಎಂದು ಉತ್ತರಿಸಿದ್ದಳು. ಅದನ್ನು ನೀಡುವಂತೆ "ನಕಲಿ ಪೊಲೀಸ್" ಒತ್ತಡ ಏರಿ ಯುವತಿಯನ್ನು ತನ್ನ ಬೈಕ್ನಲ್ಲಿ ಕುಳಿರಿಸಿ ಅನಂತಶಯನ ದೇವಳ ರಸ್ತೆಯಲ್ಲಿರುವ ಖಾಸಗಿ ಬ್ಯಾಂಕ್ನ ಅಧೀನದಲ್ಲಿರುವ ಎಟಿಎಂ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾನೆ.
ಎಟಿಎಂ ಕೇಂದ್ರದಲ್ಲಿ ಮೂರು ಸಾವಿರ ಡ್ರಾ ಮಾಡಿದ ಯುವತಿ ಹಣವನ್ನು ನೇರವಾಗಿ "ನಕಲಿ ಪೊಲೀಸ್"ನ ಕೈಗೆ ನೀಡುತ್ತಿದ್ದಂತೆ ಆತ ಯುವತಿಯನ್ನು ಅಲ್ಲಿಯೇ ಬಿಟ್ಟು ಬೈಕ್ ಏರಿ ಹೊರಟು ಹೋಗಿದ್ದಾನೆ.
ಘಟನೆಯಿಂದ ನೊಂದ ಯುವತಿ ಕೊನೆಗೂ ತನ್ನ ಜೊತೆಗೆ ಬಂದಿದ್ದ ಸಹೋದ್ಯೋಗಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾಳೆ. ಸಾರ್ವಜನಿಕ ಸಹಕಾರದಿಂದ ಯುವತಿಯೊಂದಿಗೆ ಬಂದಿದ್ದ ಯುವಕ "ನಕಲಿ ಪೊಲೀಸ್" ವಿರುದ್ಧ ನಗರ ಠಾಣೆಗೆ ದೂರು ನೀಡಿದ್ದಾನೆ.
ಸಿಸಿ ಕ್ಯಾಮರ ಅಳವಡಿಸುವ ಅಗತ್ಯ ಇದೆ:
ಯಾತ್ರಾಥಿಗಳು ಸಂದರ್ಶಿಸುವ ಸ್ಥಳಗಳಲ್ಲಿ ಉಪಟಳ ನೀಡುವ ತಂಡ ಸಕ್ರಿಯಾಗೊಂಡಿದ್ದು, ಈ ಕುರಿತು ಹಲವು ದೂರುಗಳು ಕೇಳಿ ಬಂದಿದೆ. ಯಾತ್ರಿಕರ ಹಿತ ದೃಷ್ಠಿಯಿಂದ ಐತಿಹಾಸಿಕ ಗೋಮಟ್ಟಬೆಟ್ಟ, ಚತುರ್ಮುಖ ಬಸದಿ, ರಾಮಸಮುದ್ರ, ಆನೆಕೆರೆ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಸಿಸಿ ಕ್ಯಾಮರಗಳನ್ನು ಅಳವಡಿಸುವ ಅಗತ್ಯವಿದೆ.