ಮಂಗಳೂರು, ನ 14 (Daijiworld News/MSP): ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಪಾಲಿಕೆಯಲ್ಲಿ ಈ ಬಾರಿ ಭಾರತೀಯ ಜನತಾಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಚಿತವಾಗಿದೆ. 60 ವಾರ್ಡ್ ಗಳಲ್ಲಿ 44ರಲ್ಲಿ ಬಿಜೆಪಿ ಗೆಲುವು ತನ್ನದಾಗಿಸಿದ್ದು, ಕಾಂಗ್ರೆಸ್ 14 ಸ್ಥಾನಗಳಿಗೆ ಮಾತ್ರ ತೃಪ್ತಿಪಟ್ಟುಕೊಂಡಿದೆ. ಇದರಿಂದ ಕಳೆದ ಬಾರಿ 35 ಸ್ಥಾನ ಪಡೆದು ಅಧಿಕಾರದ ಗದ್ದುಗೆ ಏರಿದ್ದ ಕಾಂಗ್ರೆಸ್ ಗೆ ಇದರಿಂದ ತೀವ್ರ ಮುಖಭಂಗವಾಗಿದೆ. ಎಸ್ ಡಿಪಿಐ 2 ವಾರ್ಡ್ ಗಳಲ್ಲಿ ಜಯಗಳಿಸಿದೆ.
ಹೀಗಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ತವರಲ್ಲಿ ಕೇಸರಿ ಪಡೆ ದಿಗ್ವಿಜಯ ಸಾಧಿಸಿದಂತಾಗಿದ್ದು, ಶಾಸಕ ವೇದವ್ಯಾಸ್ ಕಾಮತ್ ಮತ್ತು ಭರತ್ ಶೆಟ್ಟಿ ಪಾಲಿಗೆ ಪಾಲಿಕೆಯ ಫಲಿತಾಂಶ ಫ್ಲಸ್ ಆಗಿ ಪರಿಣಮಿಸಿದೆ.
1984 ಮಂಗಳೂರು ಮಹಾನಗರ ಪಾಲಿಕೆ ಅಸ್ತಿತ್ವಕ್ಕೆ ಬಂದ ಬಳಿಕ ಇದು ಏಳನೆಯ ಅವಧಿಯ ಚುನಾವಣೆಯಾಗಿದೆ. ಪಾಲಿಕೆಯ 39 ವರ್ಷಗಳ ಇತಿಹಾಸದಲ್ಲಿ 31 ಮೇಯರ್ ಗಳ ಅಧಿಕಾರವನ್ನು ಕಂಡಿದೆ. ಆರು ಬಾರಿ ನಡೆದ ಚುನಾವಣೆಯಲ್ಲಿ 5 ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಆದರೆ ಕೇವಲ ಒಂದು ಬಾರಿ ಮಾತ್ರ ಬಿಜೆಪಿ ಜಯಗಳಿಸಿತ್ತು.