ಮಂಗಳೂರು, ನ 13 (DaijiworldNews/SM): ಮಂಗಳೂರು ಮಹಾನಗರಪಾಲಿಕೆ ಚುನಾವಣಾ ಮತ ಎಣಿಕೆ ಕಾರ್ಯ ಗುರುವಾರದಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬುಧವಾರದಂದು ಮತ ಎಣಿಕಾ ಕೇಂದ್ರಕ್ಕೆ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರು ಭೇಟಿ ನೀಡಿ ಅಂತಿಮ ಹಂತದ ಸಿದ್ಧತೆಗಳನ್ನು ಪರಿಶೀಲಿಸಿದರು.
ತಲಾ 5 ವಾರ್ಡ್ಗಳಿಗೆ ಒಬ್ಬರಂತೆ ಒಟ್ಟು 12 ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ. 12 ಕೊಠಡಿಗಳಲ್ಲಿ ಮತ ಎಣಿಕೆ ಕಾರ್ಯ ನಡೆಸಲಿದ್ದಾರೆ. ಆಯಾ ಚುನಾವಣಾಧಿಕಾರಿಗಳು ಪ್ರತಿಯೊಂದು ವಾರ್ಡ್ ಮತ ಎಣಿಕೆ ಪೂರ್ಣಗೊಂಡ ನಂತರ ಇನ್ನೊಂದು ವಾರ್ಡ್ನ ಮತ ಎಣಿಕೆ ಕೈಗೊಳ್ಳಲಿದ್ದಾರೆ. ಒಂದು ಸುತ್ತಿನಲ್ಲಿ 4 ಮತಗಟ್ಟೆಗಳ ಮತ ಎಣಿಕೆ ನಡೆಯಲಿದೆ.
ಮತ ಎಣಿಕೆ ಕೇಂದ್ರ ಸುತ್ತಮುತ್ತ ತೀವ್ರ ಭದ್ರತೆ ಕೈಗೊಳ್ಳಲಾಗಿದೆ.
ಇನ್ನು ಬುಧವಾರ ಡಿಸಿಪಿ ಅರುಣಾಂಶು ಗಿರಿ ಅವರ ನೇತೃತ್ವದಲ್ಲಿ ಭದ್ರತಾ ರಿಹರ್ಸಲ್ ನಡೆಯಿತು. ಇನ್ನು ಮಂಗಳವಾರದಂದು ಪಾಲಿಕೆಯ 60 ವಾರ್ಡ್ ಗಳಿಗೆ ಚುನಾವಣೆ ನಡೆದಿದ್ದು, ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರಗೊಂಡಿದೆ. 180 ಅಭ್ಯರ್ಥಿಗಳ ಪೈಕಿ ಕೇವಲ 60 ಮಂದಿ ಮಾತ್ರ ಪಾಲಿಕೆ ಪ್ರವೇಶಿಸಲಿದ್ದಾರೆ. ಆದರೆ, ಗದ್ದುಗೆ ಏರುವವರ್ಯಾರು ಎನ್ನುವ ಕುತೂಹಲ ಸದ್ಯಕ್ಕಿದ್ದು, ಗುರುವಾರದಂದು ಇದಕ್ಕೆ ಸ್ಪಷ್ಟ ಉತ್ತರ ಸಿಗಲಿದೆ.
ಇನ್ನು ಮಹಾನಗರದಲ್ಲಿ ಶೇ. 59ರಷ್ಟು ಮತದಾನ ನಡೆದಿದ್ದು, ನಗರದ ಜನತೆ ಬಹುತೇಕರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿಲ್ಲ.