ಉಪ್ಪಿನಂಗಡಿ ಜ 11: ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಗ್ರಾಮದ ಗುಂಡ್ಯ ಬಳಿಯ ಕೊಡ್ಯಕಲ್ಲು ಎಂಬಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಆತಂಕದ ಸ್ಥಿತಿ ನಿರ್ಮಾಣಗೊಂಡ ಘಟನೆ ಬುಧವಾರ ಸಂಜೆ ನಡೆದಿದ್ದು, ಹೆದ್ದಾರಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಘಟನೆಯಿಂದ ಟ್ಯಾಂಕರ್ ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ. ಇಂಡೇನ್ ಕಂಪನಿಗೆ ಸೇರಿದ ಗ್ಯಾಸ್ ಟ್ಯಾಂಕರ್ ಇದಾಗಿದೆ. ಸುದ್ದಿ ತಿಳಿದ ತಕ್ಷಣ ಉಪ್ಪಿನಂಗಡಿ ಮತ್ತು ನೆಲ್ಯಾಡಿ ಹೊರಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿದ್ದು, ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ಸೋರುತ್ತಿರುವ ಗ್ಯಾಸ್ ಟ್ಯಾಂಕರ್ ಗೆ ಅಗ್ನಿಶಾಮಕ ದಳದವರು ಸತತವಾಗಿ ನೀರು ಹರಿಸಿ ಹೆಚ್ಚಿನ ಗ್ಯಾಸ್ ಸೋರಿಕೆಯಾಗದಂತೆ ತಡೆಹಿಡಿಯುವ ಪ್ರಯತ್ನ ಮಾಡಿದ್ದಾರೆ. ಇನ್ನು ರಾತ್ರಿ ವೇಳೆಗೆ ಇಂಡೇನ್ ತಜ್ಞರು ಕೂಡಾ ಆಗಮಿಸಿ ಗ್ಯಾಸ್ ನ್ನು ಅವಿಯಾಗಿಸುವಲ್ಲಿ ಶ್ರಮ ವಹಿಸುತ್ತಿದ್ದಾರೆ, ಇದು ಜ 11 ರ ಗುರುವಾರ ತನಕ ಮುಂದುವರಿಯುವ ಸಾಧ್ಯತೆ ಇದೆ. ಇನ್ನು ಗ್ಯಾಸ್ ಸೋರಿಕೆ ವಾಸನೆ ಸುಮಾರು ಒಂದು ಕಿ.ಮೀ ದೂರ ವ್ಯಾಪಿಸಿತ್ತು.
ಅನಿಲ ಸೋರಿಕೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಬದಲಾಯಿಸಲಾಗಿದ್ದು, ವಾಹನಗಳನ್ನು ತಡೆದು ಬದಲಿ ಮಾರ್ಗಗಳಲ್ಲಿ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತಿದೆ.