ಉಡುಪಿ, ನ.13(Daijiworld News/SS): ಪಡುಕರೆ ಬೀಚ್ ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಯೋಜನೆ ರೂಪಿಸಿ ಪ್ರಸ್ತಾವನೆ ಸಲ್ಲಿಸಿದಲ್ಲಿ ಮುಂದಿನ ಅಧಿವೇಶದಲ್ಲಿ ಮಂಡಿಸಿ ಕಾರ್ಯಗತಗೊಳಿಸಲು ಪ್ರಯತ್ನಿಸಲಾಗುವುದು ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಹೇಳಿದರು.
ಉಡುಪಿ ಜಿಲ್ಲಾಡಳಿತ, ಉಡುಪಿ ಮತ್ತು ಮಲ್ಪೆ ಅಭಿವೃದ್ಧಿ ಸಮಿತಿ, ಉಡುಪಿ ನಗರಸಭೆ, ಪ್ರವಾಸೋದ್ಯಮ ಇಲಾಖೆ, ದ.ಕ ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನಿನ ಸಹಯೋಗದೊಂದಿಗೆ ನಡೆದ ಮಲ್ಪೆ-ಪಡುಕರೆ ಬೀಚ್ ಸ್ವತ್ಛತಾ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.
ಗೋವಾ, ಕೇರಳದಂತೆ ಕರ್ನಾಟಕದ 300 ಕಿ.ಮೀ. ಉದ್ದದ ಕರಾವಳಿಯಲ್ಲಿ ಪ್ರವಾಸೋದ್ಯಮ ಬೆಳೆಸಬೇಕೆಂಬ ನಿಟ್ಟಿನಲ್ಲಿ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆದಿದ್ದು, ಕೇಂದ್ರ ಸರಕಾರದಿಂದ ಎಲ್ಲ ಸಹಕಾರ ದೊರೆಯಲಿದೆ ಎಂದು ತಿಳಿಸಿದರು.
ಶಾಸಕರ ಬೇಡಿಕೆಯಂತೆ ಕೇಂದ್ರ ಸರಕಾರದ ಸಾಗರಮಾಲಾ ಯೋಜನೆಯಡಿ ಪಡುಕರೆ ಸಮೀಪದ ಐಲ್ಯಾಂಡ್'ವರೆಗೆ ಬ್ರೇಕ್ ವಾಟರ್ ನಿರ್ಮಾಣ, ಪ್ರವಾಸಿ ಬೋಟುಗಳಿಗಾಗಿ ಇಲ್ಲಿ ಮರೀನಾ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದು ಹೇಳಿದರು.