ಕುಂದಾಪುರ, ನ 12 (Daijiworld News/MSP): ಕೋಟದಲ್ಲಿ ಜನವರಿ ೨೬ರಂದು ನಡೆದಿದ್ದ ಯತೀಶ್ ಕಾಂಚನ್ ಹಾಗೂ ಭರತ್ ಜೋಡಿ ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಜಾಮೀನು ದೊರೆಯುತ್ತಿದ್ದಂತೆ ಕೊಲೆಯಾದ ಭರತ್ನ ಬಡ ತಾಯಿ ಪಾರ್ವತಿ ದಿಟ್ಟವಾಗಿ ಸುಪ್ರೀಂ ಕೋರ್ಟಿನ ಕದ ತಟ್ಟಿದ್ದಾರೆ.
ಹೌದು. ಜನವರಿ 26ರಂದು ನಡೆದಿದ್ದ ಬರ್ಬರ ಹತ್ಯೆಗೆ ಇಡೀ ಕರಾವಳಿ ಮಾತ್ರವಲ್ಲ ರಾಜ್ಯವೇ ಬೆಚ್ಚಿ ಬಿದ್ದಿತ್ತು. ಕರಾವಳಿಯಲ್ಲಿ ಮೊದಲ ಬಾರಿಗೆ ಹತ್ಯಾ ಪ್ರಕರಣದಲ್ಲಿ ಆರೋಪಿಗಳ ಪರವಾಗಿ ಪೊಲೀಸರು ಶಾಮೀಲಾಗಿರುವ ಬಗ್ಗೆ ಬೆಳಕಿಗೆ ಬಂದ ಪ್ರಕರಣ ಇದಾಗಿತ್ತು. ಅಲ್ಲದೇ ಜಿಲ್ಲಾ ಪಂಚಾಯಿತಿ ಸದಸ್ಯರು ಕೊಲೆಗೆ ಸಂಚು ಹೂಡಿದ್ದರು ಎಂದು ಆರೋಪಿಸಲಾಗಿತ್ತು. ಮೊನ್ನೆಯ ವರೆಗೂ ಜಿಲ್ಲಾ ಸತ್ರ ನ್ಯಾಯಾಲಯ ಆರೋಪಿ ಪೊಲೀಸರೂ ಸೇರಿದಂತೆ ಯಾರೊಬ್ಬರಿಗೂ ಜಾಮೀನು ನೀಡಿರಲಿಲ್ಲ. ಆದರೆ ಜಿಲ್ಲಾ ಪಂಚಾಯತ್ ಸದಸ್ಯ ರಾಘವೇಂದ್ರ ಕಾಮಚನ್ ಹೈಕೋಟಿನ ಮೊರೆ ಹೋಗಿ ಅಲ್ಲಿ ಷರತ್ತು ಬದ್ದ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಬಳಿಕ ಆರು ಆರೋಪಿಗಳಿಗೆ ಜಿಲ್ಲಾ ಹೆಚ್ಚುವರಿ ಸತ್ರ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು.
ಆರೋಪಿಗಳಿಗೆ ಜಾಮೀನು ದೊರಕುತ್ತಿದ್ದಂತೆ ಹತ್ಯೆಯಾದ ಭರತ ಬಡ ತಾಯಿ ಪಾರ್ವತಿ ಎಂಬುವರು ತನ್ನ ಮಗನ ಸಾವಿಗೆ ನ್ಯಾಯ ದೊರಕಿಸಿಕೊಡಲು ಟೊಂಕ ಕಟ್ಟಿ ನಿಂತಿದ್ದಾರೆ. ಕಡು ಬಡತನದಲ್ಲಿ ಬೇಯುತ್ತಿರುವ ಭರತನ ತಾಯಿ ಪಾರ್ವತಿ ಆರೋಪಿಗಳಿಗೆ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಸರ್ವೋಚ್ಛ ನ್ಯಾಯಾಲಯದ ಮೊರೆ ಹೋಗಿದ್ದು, ಪಾರ್ವತಿಯವರ ಅರ್ಜಿ ವಿಚಾರಣೆಗೆ ಕೈಗೆತ್ತಿಕೊಂಡಿದೆ. ಕರಾವಳಿಯ ಗ್ರಾಮಿಣ ಭಾಗದ ಕೊಲೆ ಪ್ರಕರಣವೊಂದು ರಾಜಕೀಯದ ಒತ್ತಡಗಳ ನಡುವೆಯೂ ಸರ್ವೋಚ್ಚ ನ್ಯಾಯಾಲಯದಲ್ಲಿ ತನಿಖೆಗೆ ಅಂಗೀಕಾರವಾಗಿರುವುದು ಇದೇ ಮೊದಲು ಎನ್ನಲಾಗಿದೆ.
ಸುಪ್ರೀಂ ಕೋರ್ಟಿನ ಬಗ್ಗೆ ನನಗೆ ಗೌರವವಿದೆ. ನನ್ನ ಮಗನ ಕೊಲೆಯ ಆರೋಪಿಗಳಿಗೆ ಶಿಕ್ಷೆಯಾಗಬೇಕು. ನನಗಾದ ದುಃಖ ಇನ್ಯಾವ ತಾಯಿಗೂ ಆಗಬಾರದು. ನಮ್ಮ ಮನೆಯ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದಿದ್ದರೂ ಸಂಘ ಸಂಸ್ಥೆಗಳಲ್ಲಿ ಸಾಲ ಮಾಡಿ ನ್ಯಾಯಕ್ಕಾಗಿ ಹೋರಾಡುತ್ತಿದ್ದೇನೆ. ನನ್ನ ಮಗ ಭರತ ಮತ್ತು ಅವನ ಸ್ನೇಹಿತನ ಸಾವಿಗೆ ನ್ಯಾಯ ಸಿಗುವ ಭರವಸೆ ಇದೆ. ಕೋಟ ಗ್ರಾಮ ದೇವತೆ ಅಮೃತೇಶ್ವರಿ ತಾಯಿ ಆಶೀರ್ವಾದದಿಂದ ಸುಪ್ರೀಂ ಕೋರ್ಟಿಗೆ ಹೋಗಿದ್ದೇನೆ. ಈ ಕೊಲೆಯಲ್ಲಿ ಯಾರು ಯಾರು ಭಾಗಿ ಆಗಿದ್ದಾರೋ ಅವರಿಗೆಲ್ಲ ಶಿಕ್ಷೆ ಆಗಲಿ ಎಲ್ಲಾ ಆ ಅಮೃತೇಶ್ವರಿ ತಾಯಿಯ ಇಚ್ಛೆಯಂತೆ ಆಗಲಿ ಎಂದು ಭರತನ ತಾಯಿ ಪಾರ್ವತಿ ಹೇಳಿದ್ದಾರೆ.