ಕುಂದಾಪುರ, ನ 12 (Daijiworld News/ MB) : ಕೋಟ ಸಮೀಪದ ಅಚ್ಲಾಡಿ ಗ್ರಾಮದ ಮಧುವನ ಎಂಬಲ್ಲಿ ಕಳೆದ ನಾಲ್ಕೈದು ತಿಂಗಳಿಂದ ಜನರಲ್ಲಿ ಆತಂಕ ಸೃಷ್ಟಿಸಿದ ಗಂಡು ಚಿರತೆಯನ್ನು ಗ್ರಾಮಸ್ಥರು ಹಾಗೂ ಅರಣ್ಯಾಧಿಕಾರಿಗಳ ಇಂದು ಬೆಳಿಗ್ಗೆ ಹಿಡಿದಿದ್ದಾರೆ.
ಇಲ್ಲಿಯ ಸಮೀಪದ ಬನ್ನಾಡಿ, ವಡ್ಡರ್ಸೆ ಹಾಗೂ ಅಚ್ಲಾಡಿ ಎಂಬಲ್ಲಿ ಕಳೆದ ನಾಲ್ಕೈದು ತಿಂಗಳಿನಿಂದ ಚಿರತೆಯೊಂದು ಅಡ್ಡಾಡುತ್ತಿದದ್ದು ಗ್ರಾಮಸ್ಥರ ಕಣ್ಣಿಗೆ ಬಿದಿದ್ದು,ಜನರಿಗೆ ಆತಂಕ ಮೂಡಿತ್ತು. ಚಿರತೆಯನ್ನು ಹಿಡಿಯುವ ಸಲುವಾಗಿ ಅರಣ್ಯಾಧಿಕಾರಿಗಳು ಬೋನಿಟ್ಟಿದ್ದರೂ ಚಿರತೆ ಬೋನಿಗೆ ಬಿದ್ದಿರಲಿಲ್ಲ. ಅಲ್ಲದೇ ಬೋನು ಇಟ್ಟ ಬಳಿಕ ಹತ್ತು ಹದಿನೈದು ದಿನಗಳ ಕಾಲ ಚಿರತೆ ಆ ಪ್ರದೇಶಕ್ಕೆ ಸುಳಿಯುತ್ತಿರಲಿಲ್ಲ ಎನ್ನಲಾಗಿದೆ.
ಇಂದು ಬೆಳಿಗ್ಗೆ ಸ್ಥಳೀಯ ಮಹಿಳೆಯೊಬ್ಬರು ಚಿರತೆಯನ್ನು ಕಂಡಿದ್ದು, ಭಯಗೊಂಡ ಚಿರತೆ ಸಮೀಪದ ಮೋರಿಯ ಒಳಗೆ ಹೋಗಿತ್ತು. ಆಕೆ ತಕ್ಷಣ ಅರಣ್ಯಾಧಿಕಾರಿಗಳನ್ನು ಸಂಪರ್ಕಿಸಿದ್ದು, ಬ್ರಹ್ಮಾವರ ಉಪ ವಲಯ ಅರಣ್ಯಾಧಿಕಾರಿ ಜೀವನ್ದಾಸ್ ಶೆಟ್ಟಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ, ಮೋರಿಯ ಒಂದು ಬದಿಯಲ್ಲಿ ಹಲಗೆಗಳ ಮುಚ್ಚಿ ಇನ್ನೊಂದು ಬದಿಯಲ್ಲಿ ಬಲೆ ಹಾಗೂ ಬೋನನ್ನು ಇಟ್ಟು ಸುಮಾರು ಆರು ವರ್ಷ ಪ್ರಾಯದ ಗಂಡು ಚಿರತೆಯನ್ನು ಬೋನಿನೊಳಗೆ ಬಂಧಿಸಿದ್ದಾರೆ.
ಬಳಿಕ ಸಾಬ್ರಕಟ್ಟೆ ಪಶು ವೈದ್ಯ ಪ್ರದೀಪ್ ಕುಮಾರ್ ಎನ್.ಕೆ ನೇತೃತ್ವದಲ್ಲಿ ಚಿರತೆಯ ಆರೋಗ್ಯ ತಪಾಸಣೆ ನಡೆಸಲಾಯಿತು. ಆರೋಗ್ಯ ತಪಾಸನೆಯ ಬಳಿಕ ಚಿರತೆಯನ್ನು ಮೂಕಾಂಬಿಕ ಅಭಯಾರಣ್ಯದಲ್ಲಿ ಬಿಡಲಾಗಿದೆ ಎಂದು ಬ್ರಹ್ಮಾವರ ಉಪ ವಲಯ ಅರಣ್ಯಾಧಿಕಾರಿ ಜೀವನ್ದಾಸ್ ಶೆಟ್ಟಿ ಹೇಳಿದ್ದಾರೆ.
ಕಾರ್ಯಾಚರಣೆಯಲ್ಲಿ ಉಡುಪಿ ಫಾರೆಸ್ಟ್ರ್ ಅಧಿಕಾರಿ ಗುರುರಾಜ್ ಸಿಬ್ಬಂದಿಗಳಾದ ಶಿವಪ್ಪ ನಾಯ್ಕ್, ಸುರೇಶ್, ದೇವರಾಜ್ ಪಾಣ ಮೊದಲಾದವರು ಭಾಗವಹಿಸಿದ್ದರು.