ಮಂಗಳೂರು: ಐವನ್ ಡಿಸೋಜಾ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ
Tue, Nov 12 2019 11:26:52 AM
ಮಂಗಳೂರು, ನ 12 (Daijiworld News/MSP): ನಗರದ 39 ನೇ ವಾರ್ಡ್ ನ ಇನ್ಫೆಂಟ್ ಮೇರಿ ಹೈಯರ್ ಪ್ರೈಮರಿ ಶಾಲೆಯಲ್ಲಿ ಮತದಾನ ಕೇಂದ್ರದ ಪ್ರವೇಶದ್ವಾರದಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಅವರು ಮತದಾರರಲ್ಲಿ ಮತಯಾಚಿಸುತ್ತಿರುವುದನ್ನು ಕಂಡು ಕೆರಳಿದ ಬಿಜೆಪಿ ಕಾರ್ಯಕರ್ತರು ಮಾತಿನ ಚಕಮಕಿ ನಡೆಸಿದ ಘಟನೆ ಬೆಳಗ್ಗೆ ನಡೆಯಿತು.
ಚುನಾವಣೆಯ ಸಂದರ್ಭದಲ್ಲಿ ಸಾಮಾನ್ಯವಾಗಿ ಮತ ಕೇಂದ್ರದಿಂದ ನೂರು ಮೀಟರ್ ದೂರದವರೆಗೂ ನಿಷೇಧಿತ ವಲಯವನ್ನಾಗಿ ಘೋಷಿಸಿಲಾಗುತ್ತದೆ. ಆ ಪ್ರದೇಶದಲ್ಲಿ ಯಾರೂ ಅನಧಿಕೃತವಾಗಿ ಓಡಾಡುವಂತಿಲ್ಲ, ಪ್ರಚಾರ ನಡೆಸುವಂತಿಲ್ಲ. ಆದರೆ ಐವನ್ ಡಿಸೋಜಾ ಮತಗಟ್ಟೆಯ ಬೂತ್ನ ಪ್ರವೇಶದ್ವಾರದ ಬಳಿ ನಿಂತು ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸುವಂತೆ ಮತದಾರರನ್ನು ವಿನಂತಿಸಿರುವುದು ಕಂಡು ಬಿಜೆಪಿ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು.
ಇದಕ್ಕೆ ತದ್ವಿರುದ್ಧವಾಗಿ, ಐವನ್ ಬಿಜೆಪಿ ಕಾರ್ಯಕರ್ತರ ಮೇಲೆ ಆರೋಪ ಹೊರಿಸಿದ್ದು, ಬಿಜೆಪಿ ಕಾರ್ಯಕರ್ತರು ಮತಗಟ್ಟೆ ಬಳಿ ಇದ್ದು ಮತದಾರರಿಗೆ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ದೂರಿದರು. ಐವನ್ ಸ್ಥಳದಿಂದ ಹೊರಹೋಗದಿದ್ದರೆ, ತಮ್ಮ ಸಂಸದ ಮತ್ತು ಶಾಸಕರನ್ನು ಸ್ಥಳಕ್ಕೆ ಕರೆದು ತಮ್ಮ ಪಕ್ಷಕ್ಕೆ ಪ್ರಚಾರ ನಡೆಸುವುದಾಗಿ ಬಿಜೆಪಿ ಕಾರ್ಯಕರ್ತರು ಪಟ್ಟು ಹಿಡಿದರು. ಅದರೂ ಸ್ಥಳದಿಂದ ಕದಲದೆ ಇದ್ದಾಗ ಐವನ್ ಡಿಸೋಜಾ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಜೋರಾಯಿತು.
ನಂತರ, ಸುದ್ದಿ ತಿಳಿದ ಪೊಲೀಸರು, ಚುನಾವಣಾಧಿಕಾರಿ ಸ್ಥಳಕ್ಕೆ ಬಂದು ಐವನ್ ಡಿಸೋಜಾ ಅವರೊಂದಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರನ್ನು ಮತದಾನ ಕೇಂದ್ರದ ಪ್ರವೇಶದ್ವಾರದಿಂದ 100 ಮೀಟರ್ ಹೊರಕ್ಕೆ ಕಳುಹಿಸಿದರು . ಇದಲ್ಲದೆ ಸ್ಥಳಕ್ಕೆ ಧಾವಿಸಿದ ಎಸಿಪಿ ಎ ಗಾಂವ್ಕರ್ ಮತ್ತು ಇತರ ಹಿರಿಯ ಪೊಲೀಸ್ ಅಧಿಕಾರಿಗಳು, ಯಾವುದೇ ಉದ್ವಿಗ್ನತೆ ಇಲ್ಲದೆ ಸಾರ್ವಜನಿಕರಿಗೆ ಮುಕ್ತವಾಗಿ ಮತ ಚಲಾಯಿಸಲು ಅವಕಾಶ ನೀಡುವಂತೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಕಾರ್ಮಿಕರು ಮತ್ತು ಮುಖಂಡರಿಗೆ ಮನವಿ ಮಾಡಿದರು.
ಪೊಲೀಸ್ ತಂಡ ಬಂದ ಬಳಿಕ ಮತದಾನ ಸುಗಮವಾಗಿ ಮುಂದುವರೆಯಿತು. ಕಾಂಗ್ರೆಸ್ ಐವನ್ ಅವರಲ್ಲದೆ, ಬಿಜೆಪಿ ನಾಯಕರಾದ ಪುನೀತ್ ಕೊಟ್ಟಾರಿ, ಕ್ಯಾಪ್ಟನ್ ಬ್ರಿಜೇಶ್ ಚೌಟ, ಜೋಯ್ಲಸ್ ಮತ್ತು ನಂದನ್ ಮಲ್ಯ ಸ್ಥಳದಲ್ಲಿದ್ದರು.