ಕಾಸರಗೋಡು, ನ 11 (Daijiworld News/MSP): ಮೀನುಗಾರಿಕೆಗೆ ತೆರಳಿ ಮಲ್ಪೆಯಿಂದ ಮರಳುತ್ತಿದ್ದ ಬೆಸ್ತರು ವಿಷಾಹಾರ ಸೇವನೆಯಿಂದ ಅಸ್ವಸ್ಥ ಗೊಂಡು ಓರ್ವ ಮೃತಪಟ್ಟು , ಮೂವರು ಗಂಭೀರ ಸ್ಥಿತಿಯಲ್ಲಿ ಕಾಸರಗೋಡಿನ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
ಮೃತಪಟ್ಟವರನ್ನು ತಿರುವನಂತಪುರ ವರ್ಕಳದ ಚಾರ್ಲಿ (56) ಎಂದು ಗುರುತಿಸಲಾಗಿದೆ. ವರ್ಕಳದ ಗಿಲ್ಬರ್ಟ್ (38), ಕನ್ಯಾಕುಮಾರಿಯ ದತ್ತಾಯಿಸ್ ( 53) ಸೈದಾ ( 54)ರವರನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಐದು ಮಂದಿ ಚೇತರಿಸಿಕೊಂಡಿದ್ದಾರೆ . ಮಲ್ಪೆ ಕಡೆಯಿಂದ ಮೀನುಗಾರಿಕೆಗೆ ತೆರಳಿ ಮರಳುತ್ತಿದ್ದಾಗ ಘಟನೆ ನಡೆದಿದೆ.
ಕಣ್ಣೂರು ಆಯಿಕ್ಕಲ್ ನಿಂದ ಚಾರ್ಲಿ ಸೇರಿದಂತೆ ಒಂಭತ್ತು ಬೆಸ್ತರು ಮಲ್ಪೆಗೆ ಮೀನುಗಾರಿಕೆಗೆ ತೆರಳಿದ್ದರು. ಮೀನುಗಾರಿಕೆಗಾಗಿ ಅಗತ್ಯ ಆಹಾರ ಹಾಗೂ ಕುಡಿಯಲು ನೀರು ಬೋಟ್ ನಲ್ಲಿ ದಾಸ್ತಾನಿರಿಸಿದ್ದರು . ಈ ನೀರನ್ನು ಸೇವಿಸಿದ ಬೆಸ್ತರು ಅಸ್ವಸ್ಥಗೊಂಡಿದ್ದು, ಸೋಮವಾರ ಮಧ್ಯಾಹ್ನ ಕಾಸರಗೋಡು ತಳಂಗರೆ ತೀರಕ್ಕೆ ಬೋಟ್ ತಲುಪಿಸಿ ಕರಾವಳಿ ಪೊಲೀಸರಿಗೆ ಮಾಹಿತಿ ನೀಡಿದರು .ಬಳಿಕ ಬೆಸ್ತರನ್ನು ಕಾಸರಗೋಡು ಆಸ್ಪತ್ರೆಗೆ ದಾಖಲಿಸಲಾಯಿತು ಈ ಪೈಕಿ ಚಾರ್ಲಿ ಚಿಕಿತ್ಸೆ ಗೆ ಸ್ಪಂದಿಸದೆ ಮೃತಪಟ್ಟರು. ನೀರಿನಿಂದ ವಿಷ ಬಾಧೆ ಉಂಟಾಗಿರಬಹುದೆಂದು ಶಂಕಿಸಲಾಗಿದೆ. ನೀರಿನ ಸ್ಯಾಂಪಲ್’ನ್ನು ತಪಾಸಣೆಗೆ ಕಳುಹಿಸಲಾಗಿದೆ.