ಕುಂದಾಪುರ, ನ 11 (Daijiworld News/MB): ಹಿಂದಿನ ತಾಲೂಕು ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಅಧಿಕಾರಿಗಳು ಸಭೆ ನಡೆದು 73 ದಿನವಾದರೂ ಸೂಕ್ತ ಉತ್ತರ ನೀಡದಿರುವುದನ್ನು ವ್ಯಾಪಕವಾಗಿ ಖಂಡಿಸಿ, 18ನೇ ಸಾಮಾನ್ಯ ಸಭೆಯನ್ನೇ ಮುಂದೂಡಿದ ಘಟನೆ ನ.11ರಂದು ನಡೆಯಿತು.
ತಾ.ಪಂ.ಅಧ್ಯಕ್ಷೆ ಶ್ಯಾಮಲ ಎಸ್.ಕುಂದರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆ ಆರಂಭವಾಗುತ್ತಲೆ ಪಾಲನಾ ವರದಿಯಲ್ಲಿ ಅಧಿಕಾರಿಗಳ ಉತ್ತರ ಇರಬೇಕಾದ ಸ್ಥಳ ಖಾಲಿಯಿದ್ದು, ಸೂಕ್ತ ಉತ್ತರ ಇನ್ನೂ ತಾಲೂಕು ಪಂಚಾಯತ್ಗೆ ಬಾರದಿರುವುದಕ್ಕೆ ಸದಸ್ಯರು ಆಕ್ರೋಶ ವ್ಯಕ್ತ ಪಡಿಸಿದರು.
‘ಅಧಿಕಾರಿಗಳಿಗೆ ಸದಸ್ಯರ ಪ್ರಶ್ನೆಗೆ ಉತ್ತರ ನೀಡಬೇಕಾದ ಕನಿಷ್ಠ ಜ್ಞಾನವೂ ಇಲ್ಲವೇ? ತಾ.ಪಂ.ವ್ಯವಸ್ಥೆಯ ಮೇಲೆ ಅಧಿಕಾರಿಗಳಿಗೆ ಗೌರವವಿಲ್ಲವೇ? ಹಾಗಾದರೆ ಕಾಟಾಚಾರಕ್ಕೆ ಸಾಮಾನ್ಯ ಸಭೆ ನಡೆಯುವುದು ಬೇಡ. ಮುಂದೆ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ಪಡೆದುಕೊಂಡೇ ಸಭೆ ನಡೆಸೋಣ’ ಎಂದು ಸದಸ್ಯರು ಆಗ್ರಹಿಸಿದರು.
ಸದಸ್ಯ ಕರುಣ್ ಪೂಜಾರಿ ಮಾತನಾಡಿ ‘ಹಿಂದಿನ ಸಾಮಾನ್ಯ ಸಭೆ ನಡೆದು ಎರಡುವರೆ ತಿಂಗಳಾಯಿತು. ಎರಡು ತಿಂಗಳ ಒಳಗೆ ಸಭೆ ನಡೆಸಬೇಕೆಂದು ಕಾಯ್ದೆಯಲ್ಲಿ ಉಲ್ಲೇಖಿತವಾಗಿದೆ. ವಿಳಂಬವಾಗಿ ಸಭೆ ನಡೆಸಿದರೂ ಅಧಿಕಾರಿಗಳಿಂದ ಉತ್ತರವನ್ನು ಪಡೆಯಲು ತಾ.ಪಂ.ಗೆ ಆಗಿಲ್ಲ. ಪಾಲನಾ ವರದಿಗೆ ಉತ್ತರವೇ ಬಂದಿಲ್ಲವೆಂದರೆ ಏನರ್ಥ?’ ಎಂದು ಪ್ರಶ್ನಿಸಿದರು. ಇದಕ್ಕೆ ಸದಸ್ಯ ಮಹೇಂದ್ರ ಪೂಜಾರಿ ಧ್ವನಿಗೂಡಿಸಿದರು.
73 ದಿನಗಳ ನಂತರ ಸಭೆ ನಡೆಸುವಾಗ ಪಾಲನಾ ವರದಿಯನ್ನು ಸರಿಯಾಗಿ ಸಿದ್ಧಗೊಳಿಸಬೇಕಾಗಿತ್ತು. ಅಧಿಕಾರಿಗಳಿಂದ ಉತ್ತರ ಪಡೆದುಕೊಳ್ಳಬೇಕಾಗಿತ್ತು. ಒಂದೆಡೆ ಪ್ರಶ್ನೆಗೆ ಉತ್ತರವಿಲ್ಲ. ಇವತ್ತು ಸಭೆಗೆ 48 ಇಲಾಖೆಗಳ ಪೈಕಿ 25 ಇಲಾಖೆಗಳಿಂದ ಮಾತ್ರ ಅಧಿಕಾರಿಗಳು ಬಂದಿದ್ದಾರೆ. ಇದಕ್ಕೆ ಯಾರು ಹೊಣೆ ಎಂದು ಉಳಿದ ಸದಸ್ಯರು ಪ್ರಶ್ನಿಸಿದರು.
ಅಧ್ಯಕ್ಷೆ ಶ್ಯಾಮಲ ಎಸ್.ಕುಂದರ್ ಮಾತನಾಡಿ ‘ತಾಲೂಕು ಪಂಚಾಯತ್ನಲ್ಲಿ ಸಿಬ್ಬಂದಿಗಳ ತೀವ್ರವಾದ ಕೊರತೆ ಇದೆ. ಸಾಧ್ಯವಾದಷ್ಟು ಪಂಚಾಯತ್ ಕಾರ್ಯದರ್ಶಿಗಳನ್ನು ಬಳಸಿಕೊಳ್ಳುತ್ತಿದ್ದೇವೆ. ಆದರೆ ಕಾರ್ಯನಿರ್ವಹಣಾಧಿಕಾರಿ ಸಹಿ ಹಾಕಿದ ನಂತರವೇ ಅಧ್ಯಕ್ಷರು ಸಹಿ ಹಾಕಿ ಆಯಾಯ ಇಲಾಖೆಗಳಿಗೆ ಕಳುಹಿಸಬೇಕಾಗುತ್ತದೆ’ ಎಂದರು.
ಅಧ್ಯಕ್ಷರ ಮಾತಿಗೆ ಸಿಡಿಮಿಡಿಗೊಂಡ ಸದಸ್ಯರು ‘ಸಿಬ್ಬಂದಿಗಳ ಕೊರತೆಯಿದ್ದರೆ ಗ್ರಾ.ಪಂ.ಅಧಿಕಾರಿಗಳನ್ನು ಬಳಸಿಕೊಂಡು ಕೆಲಸ ಮಾಡಬೇಕು. ಅಧ್ಯಕ್ಷರ ಜವಾಬ್ದಾರಿಯೂ ಮಹತ್ತರವಾಗಿದೆ. ಅಧಿಕಾರಿಗಳು ಸಭೆಗೆ ನಿರಂತರವಾಗಿ ಬರುತ್ತಿಲ್ಲವೆಂದಾದರೆ ಏನರ್ಥ? ಕುಂದಾಪುರ ತಹಶೀಲ್ದಾರರು ಬಂದಿಲ್ಲ, ಗಣಿ ಇಲಾಖೆಯವರು ಬಂದಿಲ್ಲ. ಮರಳು ಸಮಸ್ಯೆಯ ಬಗ್ಗೆ ಸಾಕಷ್ಟು ಪ್ರಶ್ನೆಗಳಿವೆ. ಅದಕ್ಕೆ ಉತ್ತರ ಯಾರು ಕೊಡುವುದು. ಇನ್ನೂ ಅಧಿಕಾರಿಗಳ ಸಮಯ ನೋಡಿಕೊಂಡು ಸಭೆಯ ದಿನಾಂಕ ನಿಗದಿಗೊಳಿಸಿ’ ಎಂದರು.
ಸದಸ್ಯರ ಆಗ್ರಹದ ಪರಿಣಾಮ ಅಧ್ಯಕ್ಷರು ನ.26ಕ್ಕೆ ಸಭೆಯನ್ನು ಮುಂದೂಡಿದರು.
ಸಭೆಯಲ್ಲಿ ತಾ.ಪಂ.ಉಪಾಧ್ಯಕ್ಷ ರಾಮ ಕಿಶನ್ ಹೆಗ್ಡೆ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ರೂಪ ಪೈ, ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಡಾ|ನಾಗಭೂಷಣ ಉಡುಪ, ಬೈಂದೂರು ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಭಾರತಿ, ಬೈಂದೂರು ತಹಶೀಲ್ದಾರ್ ಉಪಸ್ಥಿತರಿದ್ದರು.
ಮೊದಲು ಕಾಡಿತ್ತು ಕೋರಂ
ಸಭೆ 10-30ಕ್ಕೆ ಆರಂಭವಾಗುತ್ತಿದ್ದಂತೆ ಕೋರಂ ಸಮಸ್ಯೆ ಬಲವಾಗಿ ಕಾಡಿತ್ತು. ಆಡಳಿತ ಪಕ್ಷದ ಬಹುತೇಕ ಕುರ್ಚಿಗಳು ಖಾಲಿಯಾಗಿದ್ದವು. 37 ತಾ.ಪಂ.ಸದಸ್ಯರು ಹಾಗೂ ನಾಮ ನಿರ್ದೇಶಿತ ಸದಸ್ಯರ ಬಹುತೇಕ ಗೈರು ಹಾಜರಾತಿ ಎದ್ದು ಕಾಣುತ್ತಿತ್ತು. ವಿರೋಧ ಪಕ್ಷದ ಸದಸ್ಯರು ಕೋರಂ ಕೊರತೆಯಿದೆ. ಸಭೆ ನಡೆಸಲು ಸಾಧ್ಯವಿಲ್ಲ. ಸಭೆ ಮುಂದೂಡಿ ಎಂದು ಆಗ್ರಹಿಸಿದರು. ಆಗ ಅಧ್ಯಕ್ಷರು 10 ನಿಮಿಷದ ತನಕ ನೋಡೋಣ ಸದಸ್ಯರು ಬರಬಹುದು. ಇಲ್ಲದಿದ್ದರೆ ಸಭೆ ಮೊಟುಕುಗೊಳಿಸೋಣ ಎಂದರು. ತಾಲೂಕು ಪಂಚಾಯತ್ ಸದಸ್ಯರೇ ಸಭೆಗೆ ಗೈರು ಹಾಜರಾಗುತ್ತಿರುವುದರ ಬಗ್ಗೆ ವ್ಯಾಪಕ ಚರ್ಚೆ ನಡೆಯಿತು. ಕೊನೆಗೂ ಒಬ್ಬೊಬ್ಬರಾಗಿ ಸದಸ್ಯರು, ನಾಮ ನಿರ್ದೇಶಿತ ಕೆಲವು ಸದಸ್ಯರ ಆಗಮನದೊಂದಿಗೆ ಸಭೆ ಆರಂಭಗೊಂಡಿತ್ತು.