ಮಂಗಳೂರು, ನ 11 (Daijiworld News/MSP): ಮಹಾನಗರ ಪಾಲಿಕೆ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯಗೊಂಡಿರುವ ಹಿನ್ನಲೆಯಲ್ಲಿ. ಮನೆಮನೆ ಭೇಟಿಯ ಮೂಲಕ ಮತದಾರರ ಮನಗೆಲ್ಲಲು ಅಂತಿಮ ಕಸರತ್ತಿನಲ್ಲಿ ಎಲ್ಲಾ ವಾರ್ಡ್ ಅಭ್ಯರ್ಥಿಗಳು ತೊಡಗಿದ್ದಾರೆ. ಇದಕ್ಕೆ ರಾಜಕೀಯ ಪಕ್ಷಗಳ ನಾಯಕರು ಸಾಥ್ ನೀಡಿದ್ದಾರೆ.
ಭಾನುವಾರ ಬೆಳಗ್ಗೆ 7 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು, ಹೀಗಾಗಿ ಬಹಿರಂಗ ಸಭೆ, ರೋಡ್ ಶೋ ಗೆ ಅವಕಾಶವಿಲ್ಲ. ಮನೆ ಮನೆ ಪ್ರಚಾರಕ್ಕೆ ಇಂದು ಸಂಜೆವರೆಗೆ ಅವಕಾಶವಿದೆ. ಈ ಹಿನ್ನಲೆಯಲ್ಲಿ ಅಭ್ಯರ್ಥಿಗಳು, ಪಕ್ಷಗಳ ಕಾರ್ಯಕರ್ತರು, ಮನೆ ಮನೆಗೆ ಭೇಟಿ ನೀಡಿ ಮತದಾರರನ್ನು ಮನಗೆಲ್ಲುವ ಅಂತಿಮ ಹಂತದ ಕಸರತ್ತಿನಲ್ಲಿ ತೊಡಗಿದ್ದಾರೆ.
ಪಾಲಿಕೆಯ ಒಟ್ಟು 60 ವಾರ್ಡ್ ಗಳಿಗೆ ಕಾಂಗ್ರೆಸ್ ನಿಂದ 60, ಬಿಜೆಪಿ 60, ಜೆಡಿಎಸ್ - 12, ಸಿಪಿಎಂ -7 , ಸಿಪಿಐ -1, ಎಸ್ ಡಿ ಪಿ ಐ - 6 , ಜೆಡಿಯು -2, ಡಬ್ಲ್ಯುಪಿಐ -3, ಕರ್ನಾಟಕ ರಾಷ್ಟ್ರಸಮಿತಿ - 2, ಹಾಗೂ ಪಕ್ಷೇತರರು-27 ಸೇರಿ ಒಟ್ಟು 180 ಮಂದಿ ಸ್ಪರ್ಧಾಕಣದಲ್ಲಿದ್ದಾರೆ. ಪಾಲಿಕೆಯ 21 ವಾರ್ಡ್ ಗಳಲ್ಲಿ ನೇರಸ್ಪರ್ಧೆ , 24 ವಾರ್ಡ್ ಗಳಲ್ಲಿ ತ್ರಿಕೋನ, 9 ವಾರ್ಡ್ ಗಳಲ್ಲಿ ಚತುಷ್ಕೋನ ಹಾಗೂ 6 ಕ್ಷೇತ್ರಗಳಲ್ಲಿ ಪಂಚಕೋನ ಸ್ಪರ್ಧೆ ಇದೆ.
ನಾಳೆ ಚುನಾವಣೆ ನಡೆಯಲಿದ್ದು, ನ.14 ರಂದು ಮತ ಎಣಿಕೆ ನಗರದ ರೊಜಾರಿಯೋ ಹೈಸ್ಕೂಲ್ ನಲ್ಲಿ ನಡೆಯಲಿದೆ.