ವರದಿ: ಮೌನೇಶ ವಿಶ್ವಕರ್ಮ
ಬಂಟ್ವಾಳ, ನ 11(Daijiworld News/MSP): ಸಂವಿಧಾನ ದಿನಾಚರಣೆಯನ್ನು ಆಚರಿಸುವ ಸುತ್ತೋಲೆ ಹೊರಡಿಸುವ ಭರದಲ್ಲಿ ಎಡವಟ್ಟುಗಳನ್ನು ಮಾಡಿಕೊಂಡ ಶಿಕ್ಷಣ ಇಲಾಖೆ, ಕೊನೆಗೂ ತನ್ನ ಸುತ್ತೋಲೆಯನ್ನೇ ವಾಪಾಸು ಪಡೆದುಕೊಂಡಿದೆ.ಅಧಿಕಾರಿಗಳ ಬೇಜವ್ದಾರಿ ನಡವಳಿಕೆಗಳಿಂದ ಒಂದಿಲ್ಲೊಂದು ಎಡವಟ್ಟುಗಳನ್ನು ಮಾಡಿಕೊಳ್ಳುತ್ತಿರುವ ಶಿಕ್ಷಣ ಇಲಾಖೆ, ಈ ಬಾರಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ವಿರುದ್ಧವೇ ರಣಕಹಳೆ ಮೊಳಗಿಸಿದಂತಿತ್ತು. ಆದರೆ ಅಂಬೇಡ್ಕರ್ ವಾದಿಗಳ ಆಕ್ರೋಶ ಹಾಗೂ ಪ್ರತಿಭಟನೆಗೆ ಹೆದರಿ ಮೂರೇ ದಿನದಲ್ಲಿ ಸುತ್ತೋಲೆಯನ್ನು ವಾಪಾಸು ಪಡೆದುಕೊಂಡಿದೆ.
ಏನಿದು ಪ್ರಕರಣ:
2019 ನವೆಂಬರ್ 6 ರಂದು ಶಿಕ್ಷಣ ಇಲಾಖೆ ತನ್ನ ವೆಬ್ ಸೈಟ್ ನಲ್ಲಿ ಸುತ್ತೋಲೆ ಹೊರಡಿಸಿ, ನವೆಂಬರ್ 26 ರಂದು ರಾಜ್ಯದ ಎಲ್ಲಾ ಶಾಲೆ ಗಳಲ್ಲಿಯೂ ಸಂವಿಧಾನ ದಿನ ವನ್ನು ಆಚರಿಸುವಂತೆ ಆದೇಶಿಸಿತ್ತು. ಅದರ ಜೊತೆಗೆ ಈ ಬಾರಿ ಹೇಗೆ ಆಚರಿಸಬೇಕೆಂಬ ಮಾರ್ಗದರ್ಶಿ ಕೈಪಿಡಿಯನ್ನೂ ಕಳುಹಿಸಿತ್ತು. ಸುತ್ತೋಲೆಯನ್ನು ಡೌನ್ ಲೋಡ್ ಮಾಡಿಕೊಂಡು ಬಳಸುವಂತೆ ಆದೇಶಿಸಿತ್ತು.
ಸುತ್ತೋಲೆಯಲ್ಲಿ ಏನಿತ್ತು..?
ಇಲಾಖೆ ಹೊರಡಿಸಿರುವ ಸುತ್ತೋಲೆಯಲ್ಲಿ, ಇಲಾಖಾ ಆದೇಶದ ಪ್ರತಿ ಸಹಿತ ಕನ್ನಡ ಹಾಗೂ ಆಂಗ್ಲ ಭಾಷೆಯಲ್ಲಿ ವಿವರಗಳುಳ್ಳ 48 ಪುಟಗಳ ಮಾರ್ಗದರ್ಶಿ ಕೈಪಿಡಿಯೂ ಇತ್ತು. ಶಾಲೆಗಳ ಪ್ರಾರ್ಥನಾ ಸಮಯದಲ್ಲಿ ಸಂವಿಧಾನದ ಪ್ರಸ್ತಾವನೆಯನ್ನು ಓದಿ ಅರ್ಥೈಸುವುದು, ಸಂವಿಧಾನದ ಪ್ರಮುಖ ಲಕ್ಷಣಗಳನ್ನು ತಿಳಿಸಿಕೊಡುವ ನಿಟ್ಟಿನಲ್ಲಿ ಪ್ರಬಂಧ ಸ್ಪರ್ಧೆ, ರಸಪ್ರಶ್ನೆಗಳನ್ನು ಏರ್ಪಡಿಸುವುದು,ಸ್ವಾತಂತ್ರ್ಯ, ನ್ಯಾಯ,ಮುಕ್ತತೆ, ಸಮಾನತೆ, ಭಾತೃತ್ವತೆ ವಿಷಯಗಳ ಪ್ಲೇಕಾರ್ಡ್ ಗಳ ಪ್ರದರ್ಶನ, ದೈನಂದಿನ ಜೀವನದಲ್ಲಿ ನನ್ನ ಸಂವಿಧಾನ ವಿಷಯ ನೀಡಿ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲು ಸುತ್ತೋಲೆಯಲ್ಲಿ ಸೂಚಿಸಲಾಗಿತ್ತಲ್ಲದೆ. ಕಿರು ನಾಟಕ ಆಯೋಜನೆ ಮಾಡಬೇಕೆಂದು ಕಿರು ನಾಟಕದ ಮುದ್ರಿತ ಸ್ಕ್ರಿಪ್ಟ್ ಅನ್ನೂ ನೀಡಲಾಗಿತ್ತು.
ಇವಿಷ್ಟೇ ಆಗಿದ್ದರೆ ಸುತ್ತೋಲೆ ಹಾಗೂ ಕೈಪಿಡಿಯಲ್ಲಿ ದೋಷ ಕಾಣುತ್ತಿರಲಿಲ್ಲ. ಆದರೆ ಪುಟ ಸಂಖ್ಯೆ 5, 10, 12,ಮತ್ತು 18ನೇ ಪುಟಗಳಲ್ಲಿ ಬಹಳ ನೇರವಾಗಿ ಮತ್ತು ಸ್ಪಷ್ಟವಾಗಿ ಉಲ್ಲೇಖಿಸಿದ್ದ ವಿವರಗಳೇ ಶಿಕ್ಷಣ ಇಲಾಖೆಯನ್ನು ಸಂಕಟಕ್ಕೆ ತಳ್ಳಿರುವುದು. "ಭಾರತದ ಸಂವಿಧಾನವನ್ನು ಡಾ.ಅಂಬೇಡ್ಕರ್ ಒಬ್ಬರೇ ಬರೆದಿಲ್ಲ", "ನಮ್ಮ ಸಂವಿಧಾನವು ನಮ್ಮ ದೇಶದಾದ್ಯಂತ ಇರುವ ವಿವಿಧ ಧರ್ಮ, ಜಾತಿ ಮತ್ತು ಬುಡಕಟ್ಟಿಗೆ ಸೇರಿದಂತಹಾ, ಅನೇಕ ಪುರುಷರು ಮತ್ತು ಮಹಿಳೆಯರು ಸೇರಿ ಮಾಡಿರುವಂತಹಾ ಒಂದು ಸಾಮೂಹಿಕ ಪ್ರಯತ್ನದ ಫಲವಾಗಿರುತ್ತದೆ. ಈ ಸಂವಿಧಾನದ ರಚನೆಯ ಹಿಂದೆ ಸಾಕಷ್ಟು ಚರ್ಚೆ, ಭಿನ್ನಾಭಿಪ್ರಾಯ ಮತ್ತು ಬದಲಾವಣೆಗಳಂತಹ ಅನೇಕ ಕ್ರಿಯೆಗಳು ನಡೆದಿರುತ್ತದೆ" ಎಂಬುದನ್ನು ಉಲ್ಲೇಖಿಸಲಾಗಿದೆ. ಇನ್ನೊಂದೆಡೆ "ಹಲವಾರು ಜನರಿಂದ ಕೂಡಿದ್ದ ಸಂವಿಧಾನ ರಚನಾ ಸಭೆ ಎಂದು ಕರೆಯಲ್ಪಟ್ಟ ತಂಡದಿಂದ ನಮ್ಮ ಸಂವಿಧಾನ ರಚಿಸಲಾಯಿತು ಎಂಬುದು ನಮ್ಮಲ್ಲಿ ಸಾಕಷ್ಟುಜನರಿಗೆ ತಿಳಿದಿರುವುದಿಲ್ಲ" ಮತ್ತೊಂದೆಡೆ "ಬೇರೆ ಬೇರೆ ಸಮಿತಿಗಳು ಬರೆದಂತಹದ್ದನ್ನು ನೋಡಿ ಅವುಗಳನ್ನು ಒಟ್ಟು ಕೂಡಿಸಿ ಅಂತಿಮ ಕರಡನ್ನು ತಯಾರಿಸುವುದು ಅಂಬೇಡ್ಕರ್ ರ ಕಾರ್ಯವಾಗಿತ್ತು. ಅವರು ಕರಡು ಸಮಿತಿಯ ಅಧ್ಯಕ್ಷರಾಗಿದ್ದರು" ಎನ್ನುವ ಉಲ್ಲೇಖಗಳು ಅಂಬೇಡ್ಕರ್ ರನ್ನು ಅಗೌರವದಿಂದ ಕಂಡಂತೆ ಎಂಬ ಆಕ್ರೋಶಗಳು ಕೇಳಿಬಂದಿತ್ತು. ಅಂಬೇಡ್ಕರ್ ಕುರಿತಾಗಿ ನಕಾರಾತ್ಮಕ ಅಂಶಗಳನ್ನು ಮಕ್ಕಳ ತಲೆಗೆ ತುರುಕುವ ಸಾಲುಗಳಿವು ಇವು ಬದಲಾಗಬೇಕೆಂಬ ಕೂಗು ಕೇಳಿ ಬಂದಿತ್ತು.
ಖಾಸಗಿ ಸಂಸ್ಥೆ ಸಿದ್ಧಪಡಿಸಿದ ಕೈಪಿಡಿ..?
ಆ ಸರ್ಕಾರಿ ಸುತ್ತೋಲೆ ಮತ್ತು ಅದರ ಜೊತೆಗಿನ ಕೈಪಿಡಿಯನ್ನು ಸಿ.ಎಂ.ಸಿ.ಎ ( CMCA) ಎಂಬ ಖಾಸಗೀ ಸಂಸ್ಥೆ ತಯಾರಿಸಿತ್ತು. ಶಿಕ್ಷಣ ಇಲಾಖೆ ಶಾಲೆಗೆ ಈ ಸುತ್ತೋಲೆಯನ್ನು ಶಾಲೆಗೆ ಕಳುಹಿಸಿತ್ತು.
ಕೇಳಿಬಂತು ಅಂಬೇಡ್ಕರ್ ಧ್ವನಿ
ಇತ್ತ ಶಾಲೆಗಳಲ್ಲಿ ಮುಖ್ಯಶಿಕ್ಷಕರು ಸುತ್ತೋಲೆಯನ್ನು ಡೌನ್ಲೋಡ್ ಮಾಡುತ್ತಿರುವಂತೆಯೇ ಮತ್ತೊಂದೆಡೆ ಅಂಬೇಡ್ಕರ್ ರವರ ಅಗೌರವಕ್ಕೆ ಪ್ರತಿಯಾಗಿ ಪ್ರಜಾಸತ್ತಾತ್ಮಕ ಧ್ವನಿಯೊಂದು ರಾಜ್ಯಮಟ್ಟದಲ್ಲಿ ಕೇಳಿಬಂತು.
ಪ್ರಗತಿಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುವ ಬೀದರ್ ನ ಶ್ಯಾಮಸುಂದರ್ , ಡಾ.ದ್ವಾರಕಾನಾಥ್, ಉಮಾಶಂಕರ್, ಮಹದೇವಸ್ವಾಮಿ, ಜ್ಞಾನಪ್ರಕಾಶ ಸ್ವಾಮೀಜಿ, ಮೈಸೂರಿನ ಮಾಜಿ ಮೇಯರ್ ಪುರುಷೋತ್ತಮ್, ಡಾ.ಕೃಷ್ಣಮೂರ್ತಿ ಚಮರಂ, ಡಾ.ವಿಠಲ್ ದೊಡ್ಡಮನಿ, ರೇಣುಕಾ ಸಿಂಗೆ , ಬಿಎಸ್ ಪಿ ಯ ರಾಜ್ಯಾಧ್ಯಕ್ಷರಾದ ಕೃಷ್ಣಮೂರ್ತಿ, ಜಯಚಂದ್ರ, ಹ.ರಾ.ಮಹಿಶ ಮೊದಲಾದವರು ಧ್ವನಿಯೆತ್ತಿ ಹೋರಾಟಕ್ಕೆ ಸಿದ್ಧತೆ ನಡೆಸತೊಡಗಿದರು. ಇತ್ತ ಶಾಸಕ ಪ್ರಿಯಾಂಕ ಖರ್ಗೆಯವರೂ ಇಲಾಖಾ ಮಟ್ಟದಲ್ಲಿ ಈ ಕುರಿತು ಚರ್ಚಿಸಿದರು. ಜೊತೆಗೆ ಭಾರತೀಯ ಸಂವಿಧಾನ ರಕ್ಷಣಾ ಪಡೆ (ICPF) ಯ ಮೂಲಕ ಹೋರಾಟದ ರೂಪುರೇಷೆಗಳು ಸಿದ್ಧವಾಗುತ್ತಿರುವಂತೆಯೇ ಶಿಕ್ಷಣ ಇಲಾಖೆ ಸುತ್ತೋಲೆಯನ್ನು ಹಿಂದಕ್ಕೆ ಪಡೆದಿದೆ.
ಸುತ್ತೋಲೆಯೇ ಲಭ್ಯವಿಲ್ಲ
ಪ್ರಸ್ತುತ ಶಿಕ್ಷಣ ಇಲಾಖೆಯ ವೆಬ್ ಸೈಟ್ ನಲ್ಲಿ ಈ ಸುತ್ತೋಲೆಯೇ ಸಿಗುತ್ತಿಲ್ಲ.ಸುತ್ತೋಲೆ ಕ್ರಮಸಂಖ್ಯೆ 632 ಅನ್ನು 9-11-2019 ರಂದು ಹಿಂದಕ್ಕೆ ಪಡೆಯಲಾಗಿದೆ ಎಂಬ ಮಾಹಿತಿ ಇಲಾಖಾ ವೆಬ್ ಸೈಟ್ ನಲ್ಲಿ ದೊರೆಯುತ್ತಿದೆ. ಹಾಗೆಂದು ಸುತ್ತೋಲೆ, ಕೈಪಿಡಿಯನ್ನು ತಿದ್ದುಪಡಿ ಮಾಡಲಾಗುತ್ತದೆ ಎಂಬ ಬಗ್ಗೆಯೂ ಯಾವುದೇ ಉಲ್ಲೇಖವಿಲ್ಲ.
ಈ ಕುರಿತು ಪ್ರತಿಕ್ರಿಯಿಸಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ , "ಸಂವಿಧಾನ ದಿನ ಕ್ಕೆ ಸಂಬಂಧಿಸಿ ಹೊರಡಿಸಲಾದ ಸುತ್ತೋಲೆಯಲ್ಲಿನ ಆಕ್ಷೇಪಾರ್ಹ ಮಾಹಿತಿಗಳನ್ನು ತಿದ್ದುಪಡಿ ಮಾಡಲು ಸೂಚಿಸಲಾಗಿದ್ದು, ವಿವಾದಿತ ಸುತ್ತೋಲೆ ಹಿಂಪಡೆಯಲಾಗಿದೆ, ಸುತ್ತೋಲೆ ಸಿದ್ಧ ಪಡಿಸಿದವರ ಮೇಲೂ ಕ್ರಮಕೈಗೊಳ್ಳಲು ನಿರ್ದೇಶನ ನೀಡಲಾಗಿದೆ" ಎಂದಿದ್ದಾರೆ.