ಮಂಗಳೂರು, ನ 10 (DaijiworldNews/SM): ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಕೌಂಟ್ ಡೌನ್ ಶುರುವಾಗಿದ್ದು, ನವಂಬರ್ ೧೨ರಂದು ಮತದಾನ ನಡೆಯಲಿದೆ. ಈ ನಡುವೆ ನವಂಬರ್ 10ರ ರವಿವಾರದಂದು ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದೆ.
ಚುನಾವಣಾ ಬಹಿರಂಗ ಪ್ರಚಾರ ರವಿವಾರ ಸಂಜೆ 6 ಗಂಟೆಗೆ ಅಂತ್ಯಗೊಂಡಿದೆ. ಇನ್ನು ಇಂದು ಬಹಿರಂಗ ಪ್ರಚಾರ ಅಂತ್ಯಗೊಂಡ ಹಿನ್ನೆಲೆಯಲ್ಲಿ ದಿನವಿಡೀ ಅಭ್ಯರ್ಥಿಗಳು ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ದಿನವಿಡೀ ಬಿರುಸಿನ ಮತ ಪ್ರಚಾರ ನಡೆಸಿದರು.
ಅಭ್ಯರ್ಥಿಗಳು ಮತದಾರರ ಮನೆ ಮನೆಗಳಿಗೆ ತೆರಳಿ ಮತದಾರರ ಮನವೊಲಿಸುವ ದೃಶ್ಯ ಸಾಮಾನ್ಯವಾಗಿತ್ತು. ಈ ಹಿಂದೆ ಕಾರ್ಪೊರೇಟರ್ ಗಳಾಗಿದ್ದವರು ತಮ್ಮನ್ನೇ ಮತ್ತೆ ಆಯ್ಕೆ ಮಾಡುವಂತೆ ಮತದಾರರಲ್ಲಿ ವಿನಂತಿಸಿಕೊಂಡರು. ಮತ್ತೊಂದೆಡೆ ಈ ಹಿಂದೆ ಆಡಳಿತದಲ್ಲಿದ್ದವರ ವೈಫಲ್ಯವನ್ನು ಎತ್ತಿಕಟ್ಟುವ ಮೂಲಕ ತಮ್ಮನ್ನು ಆಯ್ಕೆಗೊಳಿಸುವಂತೆ ಎದುರಾಳಿ ಪಕ್ಷದವರು ಮತದಾರರಲ್ಲಿ ವಿನಂತಿಸಿಕೊಂಡರು.
ಈ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷ ತಮ್ಮ ಅಧಿಕಾರ ಉಳಿಸಿಕೊಳ್ಳಲು ಕಸರತ್ತು ನಡೆಸುತ್ತಿದೆ. ಮತ್ತೊಂದೆಡೆ ರಾಜ್ಯ, ಕೇಂದ್ರಗಳಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಪಕ್ಷ ತಮಗೆ ಅಧಿಕಾರ ನೀಡಿ ಮಂಗಳೂರಿನ ಚಿತ್ರಣವನ್ನೇ ಬದಲಿಸುತ್ತೇವೆ ಎನ್ನುವ ಮೂಲಕ ವಿವಿಧ ತಂತ್ರಗಳನ್ನು ನಡೆಸುತ್ತಿದ್ದಾರೆ. ಈ ಎರಡೂ ಪಕ್ಷಕ್ಕೂ ಈ ಬಾರಿಯ ಚುನಾವಣೆ ಪ್ರತಿಷ್ಟೆಯ ಕಣವಾಗಿದೆ.