ಮಂಗಳೂರು, ನ 10 (Daijiworld News/MB) : ಅಕ್ರಮ ಚಿನ್ನ ಸಾಗಾಟ ಮಾಡುತ್ತಿದ್ದ ಭಟ್ಕಳ ಮೂಲದ ಸಿಬ್ಗತುಲ್ಲ ಕೋಲಾ ಎಂಬಾತನನ್ನು ನ 8 ರ ಶುಕ್ರವಾರ ಕಂದಾಯ ಗುಪ್ತಚರ ಇಲಾಖೆಯ ನಿರ್ದೇಶನಾಲಯದ ಪ್ರಾದೇಶಿಕ ಘಟಕದ ಅಧಿಕಾರಿಗಳು ಮಂಗಳೂರು ಕೆ.ಸ್.ಆರ್.ಟಿ.ಸಿ. ಬಸ್ಸು ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ಬೆಂಗಳೂರಿನಿಂದ ಮಣಿಪಾಲಕ್ಕೆ ಸಂಚರಿಸುತ್ತಿದ್ದ ಬಸ್ ನಲ್ಲಿ ಸಂಚರಿಸುತ್ತಿದ್ದ ಖಚಿತ ಮಾಹಿತಿ ಪಡೆದ ಟಿ ಆರ್ ಐ ಅಧಿಕಾರಿಗಳು ಆತನನ್ನು ಸಂಜೆ 4.15ಕ್ಕೆ ಬಸ್ ಮಂಗಳೂರು ತಲುಪಿದಾಗ ಬಂಧಿಸಿದ್ದು, ಆತನಲ್ಲಿದ್ದ 59.52ಲಕ್ಷ ಮೌಲ್ಯದ 1.5 ಕೆ.ಜಿ. ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಸಿಗರೇಟ್ ಪ್ಯಾಕೇಟ್ ನಲ್ಲಿ ವಿದೇಶಿ ಮೂಲದ 13 ಚಿನ್ನದ ಗಟ್ಟಿಗಳನ್ನು ಸಾಗಿಸುತ್ತಿದ್ದ.
ಆತ ಅಕ್ರಮವಾಗಿ ದುಬಾಯಿಯಿಂದ ಸಿಂಗಾಪುರಗೆ, ಅಲ್ಲಿಂದ ಚೆನ್ನೈಗೆ ಸಾಗಾಟ ಮಾಡುತ್ತಿದ್ದು, ಆತನಲ್ಲಿ ಈ ಚಿನ್ನ ಖರೀದಿಗೆ ಸಂಬಂಧಿಸಿದ ದಾಖಲೆಗಳು ಇರಲಿಲ್ಲ ಎಂದು ವಿಚಾರಣೆಯ ವೇಳೆ ತಿಳಿದು ಬಂದಿದೆ.
ಸಿಂಗಾಪುರ ಚಿನ್ನ ಸಾಗಾಟದ ಸ್ಪಾಟ್ ಆಗಿರದ ಕಾರಣ ಹಾಗೂ ಕಸ್ಟಮ್ಸ್ ಅಧಿಕಾರಿಗಳ ಕಣ್ಣು ತಪ್ಪಿಸಿ ಚಿನ್ನವನ್ನು ಸಾಗಾಟ ಮಾಡಬೇಕೆಂಬ ಉದ್ದೇಶದಿಂದ ದುಬಾಯಿಂದ ಸಿಂಗಾಪುರದ ದೂರದ ದಾರಿ ಬಳಸಿ ಚೆನ್ನೈಗೆ ವಿಮಾನ ಮೂಲಕ ಬಂದು ಅಲ್ಲಿಂದ ಬೆಂಗಳೂರಿಗೆ ಮತ್ತು ಬೆಂಗಳೂರಿನಿಂದ ಮಂಗಳೂರಿಗೆ ಬಸ್ ಮೂಲಕ ಬಂದಿದ್ದಾನೆ.
ಕಮೀಷನ್ ಗಾಗಿ ನಾನು ಚಿನ್ನ ಸಾಗಾಟ ಮಾಡುತ್ತಿದ್ದು, ಭಟ್ಕಳ ಮೂಲದ ವ್ಯಕ್ತಿಯೋರ್ವ ಈ ಚಿನ್ನ ನೀಡಿದ್ದಾನೆಂದು ಆರೋಪಿ ಒಪ್ಪಿಕೊಂಡಿದ್ದಾನೆ.