ಮಂಗಳೂರು, ನ 10 (Daijiworld News/MB) : ಸರ ಕಳ್ಳತನದ ಆರೋಪಿಯನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರು ಪಡಿಸಿ, ನ 8 ರ ಶುಕ್ರವಾರ ಸಂಜೆ ಮಂಗಳೂರಿನ ಸಬ್ ಜೈಲಿಗೆ ಕರೆತರುವಾಗ ಪರಾರಿಯಾದ ಆರೋಪಿ ಇನ್ನೂ ಪತ್ತೆಯಾಗಿಲ್ಲ.
ಬಂಟ್ವಾಳ ಗೂಡಿನಬಳಿಯ ನಿವಾಸಿ ಮಹಮ್ಮದ್ ರಫೀಕ್ ಸರಗಳ್ಳತನದ ಆರೋದಪಲ್ಲಿ ಬಂಧಿಸಲಾಗಿತ್ತು. ವಿಚಾರಣೆಗೆಂದು ಈತನನ್ನು ವೇಣೂರು ಠಾಣೆಯ ಪೊಲೀಸರು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ವಾಪಸ್ ಬರುವಾಗ ಬೆಂಗಾವಲು ಪೊಲೀಸರನ್ನು ದೂಡಿ ಹಾಕಿ ಅಲ್ಲಿದ್ದ ಬೈಕ್ ನಲ್ಲಿ ಪರಾರಿಯಾಗಿದ್ದಾನೆ.
ಪೊಲೀಸರು ಆ ಕೂಡಲೇ ಇನ್ನೊಂದು ಬೈಕ್ ನಲ್ಲಿ ಹಿಂಬಾಲಿಸಿದ್ದು, ಆದರೆ ಆತ ತಪ್ಪಿಸಿಕೊಂಡಿದ್ದ. ಮಹಮ್ಮದ್ ರಫೀಕ್ ಕೇರಳದ ಕಡೆಗೆ ಹೋಗಿದ್ದಾನೆಂದು ಪೊಲೀಸರು ಸಂಶಯ ಪಟ್ಟಿದ್ದಾರೆ.
ರಫೀಕ್ ಮೊದಲೇ ಸಂಚು ರೂಪಿಸಿ ಪರಾರಿಯಾಗಿದ್ದಾನೆ ಎನ್ನಲಾಗಿದ್ದು, ಕಾರ್ಯಾಚರಣೆಗೆ ವಿಶೇಷ ತಂಡ ರಚಿಸಲಾಗಿದೆ.
ಆರೋಪಿಯ ಕುರಿತು ಮಾಹಿತಿ ನೀಡಿದವರಿಗೆ ಬಹುಮಾನ ನೀಡಲಾಗುವುದು. ಘಟನೆಯ ವಾಸ್ತವಂಶದ ಕುರಿತು ಪೊಲೀಸರು ನನಗೆ ವರದಿ ಸಲ್ಲಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ಪೊಲೀಸರಿಗೆ ಆದೇಶ ಮಾಡಿದ್ದಾರೆ.