ಮಂಗಳೂರು, ನ 09 (DaijiworldNews/SM): ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಕ್ಷಣಗಣನೆ ಆರಂಭಗೊಂಡಿದೆ. ಈ ಹಿಂದೆ ಐದು ವರ್ಷಗಳ ಅವಧಿಗೆ ಪಾಲಿಕೆಯಲ್ಲಿ ಉತ್ತಮ ಆಡಳಿತವನ್ನು ಕಾಂಗ್ರೆಸ್ ನೀಡಿದ್ದು, ಮುಂದಿನ ಅವಧಿಗೂ ಜನತೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕೆಂದು ಮಾಜಿ ಸಚಿವ ರಮಾನಾಥ ರೈ ಮಹಾನಗರದ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷ ಕಾಂಗ್ರೆಸ್ ಕುರಿತಂತೆ ಅಪಪ್ರಚಾರ ನಡೆಸುತ್ತಿದೆ. ಮಂಗಳೂರಿನ ಜನತೆ ಅಪಪ್ರಚಾರಗಳಿಗೆ ಕಿವಿಗೊಡಬಾರದು. ಬದಲಿಗೆ ಕಾಂಗ್ರೆಸ್ ಪಕ್ಷವನ್ನು ಜನತೆ ಬೆಂಬಲಿಸಬೇಕು. ಪಾಲಿಕೆಯಲ್ಲಿ ಕಾಂಗ್ರೆಸ್ ಭ್ರಷ್ಟಾಚಾರ ರಹಿತವಾದ ಆಡಳಿತವನ್ನು ನೀಡಿದೆ ಎಂದವರು ಹೇಳಿದ್ದಾರೆ.
ಇನ್ನು ಜಿಲ್ಲೆಯಲ್ಲಿ ಬಿಜೆಪಿ ಶಾಸಕರು ಆಯ್ಕೆಯಾಗಿ 2 ವರ್ಷವಾಗುತ್ತಿದೆ. ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರಕಾರವೇ ಆಡಳಿತದಲ್ಲಿದೆ. ಬಿಜೆಪಿ ಶಾಸಕರೇ ಪಾಲಿಕೆ ಚುನಾವಣೆಗೆ ತಡೆ ತಂದಿದ್ದರು. ಪಾಲಿಕೆಗೆ ಆಡಳಿತಾಧಿಕಾರಿ ನೇಮಿಸಿದ್ದರು. ಆದರೆ, ಆಡಳಿತಾಧಿಕಾರಿಯ ಹೆಸರಿನಲ್ಲಿ ಶಾಸಕರೇ ಆಡಳಿತ ನಡೆಸುತ್ತಿದ್ದರು ಎಂದು ರಮಾನಾಥ ರೈ ವಾಗ್ದಾಳಿ ನಡೆಸಿದ್ದಾರೆ.
ಇನ್ನು ಮಂಗಳೂರು ಪಾಲಿಕೆಯಲ್ಲಾಗಲಿ, ರಾಜ್ಯ, ದೇಶದ ರಾಜಕಾರಣದಲ್ಲಾಗಲಿ ಕಾಂಗ್ರೆಸ್ ಪಕ್ಷ ಎಲ್ಲಾ ವರ್ಗದವರಿಗೂ ಮಣೆ ಹಾಕಿದೆ. ಇದಕ್ಕೆ ನಗರದಲ್ಲಿ ಕಳೆದ ಅವಧಿಯಲ್ಲಿ ಆಯ್ಕೆಯಾದ ಮೇಯರ್, ಉಪ ಮೇಯರ್ ಗಳೇ ನಿದರ್ಶನ ಎಂದಿದ್ದಾರೆ.