ಕಡಬ, ನ 09 (DaijiworldNews/SM): ಎಲ್ಲಾ ಕ್ಷೇತ್ರಗಳಲ್ಲೂ ಕರಾವಳಿಗರು ಕೈಯಾಡಿಸಿರುವುದು ನಮಗೆ ತಿಳಿದಿರುವ ವಿಚಾರ. ಅದರಂತೆ ಶನಿವಾರದಂದು ಹೊರಬಿದ್ದ ಐತಿಹಾಸಿಕ ಅಯೋಧ್ಯೆ ತೀರ್ಪಿನ ಸುಪ್ರಿಂಕೋರ್ಟ್ ಪಂಚಪೀಠದಲ್ಲಿ ಕರಾವಳಿಯ ನ್ಯಾಯಮೂರ್ತಿಯೊಬ್ಬರಿದ್ದರು ಎಂಬುವುದು ನಮಗೆ ತಿಳಿದಿರುವ ವಿಚಾರ. ಮೂಡುಬಿದಿರೆ ಮೂಲದವರಾದ ನ್ಯಾ. ಅಬ್ದುಲ್ ಬಶೀರ್ ಪಂಚಪೀಠದ ಓರ್ವ ಸದಸ್ಯರಾಗಿದ್ದಾರೆ. ಈಗಾಗಲೇ ಅಯೋಧ್ಯೆಯ ಭೂವಿವಾದಕ್ಕೆ ಸುಪ್ರೀಂಕೋರ್ಟ್ ತೆರೆ ಎಳೆದಿದೆ. ಅಕ್ಟೋಬರ್ ತಿಂಗಳಲ್ಲಿ ವಿವಾದಕ್ಕೆ ಸಂಬಂಧಿಸಿದಂತೆ ವಿಚಾರಣೆಯನ್ನು ಅಂತಿಮಗೊಳಿಸಿತ್ತು. ವಿಚಾರಣೆ ಸಂದರ್ಭ ಬಾಬರಿ ಮಸೀದಿ ಪರ ವಾದ ಮಂಡಿಸಲು ಕರಾವಳಿ ಇಬ್ಬರು ವಕೀಲರಿದ್ದರು ಎಂಬುವುದು ಗಮನಾರ್ಹ ವಿಚಾರ.
ಬಾಬರಿ ಮಸೀದಿಯ ಪರವಾಗಿ ವಾದ ನಡೆಸಲು ದೇಶದ ಹಿರಿಯ ವಕೀಲರಾದ ಡಾ. ರಾಜೀವ್ ಧವನ್, ಮೀನಾಕ್ಷಿ ಅರೋರಾ, ಹಾಗೂ ದಫರುಲ್ಲಾ ಜೀಲಾನಿಯವರನ್ನೊಳಗೊಂಡ ತಂಡದಲ್ಲಿ ಉಪ್ಪಿನಂಗಡಿ ಹಾಗೂ ಸುಳ್ಯದ ಯುವ ವಕೀಲರಿಬ್ಬರು ಇದ್ದರೆನ್ನುವುದು ಕರಾವಳಿಗರು ಹೆಮ್ಮೆಪಡಬೇಕಾದ ಸಂಗತಿ. ಐತಿಹಾಸಿಕವಾಗಿರುವ ಹಾಗೂ ಎರಡು ಸಮುದಾಯದ ಕುರಿತಾಗಿದ್ದ ಈ ವಿವಾದದ ಬಗ್ಗೆ ವಕಾಲತ್ತು ನಡೆಸಲು ಹಿರಿಯ ವಕೀಲರೊಂದಿಗೆ ನಮ್ಮ ಕರಾವಳಿಯ ಯುವ ವಕೀಲರು ಕೈಯಾಡಿಸಿರುವುದು ಗಮನಿಸಬೇಕಾದ ವಿಚಾರವಾಗಿದೆ.
ಉಪ್ಪಿನಂಗಡಿ ಸಮೀಪದ ಹಿರೇಬಂಡಾಡಿ ನಿವಾಸಿ ದಿ| ಯೂಸುಫ್ ಎಂಬವರ ಪುತ್ರ ಅಬ್ದುಲ್ ರಹಿಮಾನ್ ಹಾಗೂ ಸುಳ್ಯ ಸಮೀಪದ ಗಾಂಧಿನಗರ ಕಲ್ಲುಮುಟ್ಲು ನಿವಾಸಿ ಅಬೂಬಕ್ಕರ್ ಎಂಬವರ ಪುತ್ರ ಶರೀಫ್, ಬಾಬರಿ ಮಸೀದಿಯ ಪರ ವಾದಿಸುವ ತಂಡದಲ್ಲಿದ್ದ ವಕೀಲರಾಗಿದ್ದಾರೆ. ಪುತ್ತೂರಿನ ನ್ಯಾಯಾಲಯದಲ್ಲಿ ವಕೀಲ ವೃತ್ತಿ ನಡೆಸುವ ಮೂಲಕ ತನ್ನ ವೃತ್ತಿಯನ್ನು ಆರಂಭಿಸಿದ್ದ ಅಬ್ದುಲ್ ರಹಿಮಾನ್ ಬಳಿಕ ಸುಪ್ರಿಂಕೋರ್ಟಿನಲ್ಲಿ ವಕೀಲರಾಗಿ ಸೇವೆ ಆರಂಭಿಸಿದ್ದರು.
ತನ್ನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಸುಳ್ಯದ ಗಾಂಧಿನಗರದಲ್ಲಿ ಪೂರೈಸಿ, ಸುಳ್ಯ ಸರಕಾರಿ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪಡೆದ ಶರೀಫ್, ಸುಳ್ಯದ ಎನ್.ಎಂ.ಸಿ. ಯಲ್ಲಿ ಪದವಿ ಹಾಗೂ ಕೆವಿಜಿಯಲ್ಲಿ ಎಲ್.ಎಲ್.ಬಿ ಮುಗಿಸಿಕೊಂಡಿದ್ದರು. 2018ರ ಫೆಬ್ರವರಿಯಿಂದ ಸುಪ್ರೀಂ ಕೋರ್ಟ್ ನಲ್ಲಿ ವಕೀಲರಾಗಿ ವಾದ ಮಂಡಿಸಲು ಆರಂಭಿಸಿದ್ದರು.