ಮಂಗಳೂರು, ನ 09 (Daijiworld News/MSP): ದೇರಳಕಟ್ಟೆಯ ಅಂಬ್ಲಮೊಗರು ಬೆಳ್ಮ ಗ್ರಾಮದಲ್ಲಿ ಅಪ್ರಾಪ್ತ ಬಾಲಕನ ಮೇಲೆ ಸ್ವಾಭಾವಿಕ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಪೊಕ್ಸೋ ವಿಷೇಶ ನ್ಯಾಯಾಲಯದಲ್ಲಿ ಅಪರಾಧಿ ಬೆಳ್ಮ ರೆಂಜಾಡಿ ನಿವಾಸಿ ಮಹಮ್ಮದ್ ಅಶ್ರಫ್ ಯಾನೆ ಅಶ್ರಫ್ (38) ಎಂಬಾತನಿಗೆ ೧೦ ವರ್ಷ ಕಠಿಣ ಸಜೆ ವಿಧಿಸಿ ತೀರ್ಪು ನೀಡಿದೆ. ಮಾತ್ರವಲ್ಲದೆ 5 ಸಾವಿರ ದಂಡ ವಿಧಿಸಿದೆ. ಇದರಲ್ಲಿ 3 ಸಾವಿರ ರೂ.ಗಳನ್ನು ನೊಂದ ಬಾಲಕನಿಗೆ ಮತ್ತು ಉಳಿದ 2 ಸಾವಿರ ರೂ. ಗಳನ್ನು ಸರಕಾರಕ್ಕೆ ಪಾವತಿಸಬೇಕು ಎಂದು ಹೇಳಿದೆ.
ಮಹಮ್ಮದ್ ಅಶ್ರಫ್ 2016 ರ ಜು.13ರಂದು ಮಧ್ಯಾಹ್ನ ಗುಜರಿ ಹೆಕ್ಕುವ ನೆಪದಲ್ಲಿ ಬಾಲಕನ ಮನೆಗೆ ಬಂದು ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದಲ್ಲಿ 10 ಜನರನ್ನುಸಾಕ್ಷಿಯನ್ನಾಗಿ, 10 ದಾಖಲಾತಿಗಳನ್ನು ಪರಿಗಣಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಉಳ್ಳಾಲ ಠಾಣೆ ನಿರೀಕ್ಷಕ ಕೆ.ಆರ್. ಗೋಪಿಕೃಷ್ಣ, ಉಪ ನಿರೀಕ್ಷಕ ಶಿವಪ್ರಕಾಶ್ ದೋಷರೋಪಣ ಪಟ್ಟಿ ಸಲ್ಲಿಸಿದ್ದರು. ಬಾಲಕ ಮತ್ತು ಅಜ್ಜಿ ಮನೆಯಲ್ಲಿದ್ದ ಸಂದರ್ಭದಲ್ಲಿ ಗುಜರಿ ಸಾಮಾಗ್ರಿ ಸಂಗ್ರಹಕ್ಕೆಂದು ಮನೆಗೆ ಬಂದ ಅಶ್ರಫ್ ಮನೆಯಲ್ಲಿ ಗುಜರಿ ಇಲ್ಲ ಎಂದರೂ ಒತ್ತಾಯ ಮಾಡಿ ಗುಜರಿ ಸಂಗ್ರಹಕ್ಕೆಂದು ಮನೆಯ ಹಿಂಭಾಗಕ್ಕೆ ಬಾಲಕನನ್ನು ಕರೆದೊಯ್ದು, ಲೈಂಗಿಕ ದೌರ್ಜನ್ಯ ನಡೆಸಿ ಪರಾರಿಯಾಗಿದ್ದಾನೆ. ಇದರಿಂದ ಆಘಾತಕ್ಕೊಳಗಾದ ಬಾಲಕ ಪೋಷಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಪೋಷಕರು ಉಳ್ಳಾಲ ಪೊಲೀಸು ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದರು.