ಬಂಟ್ವಾಳ ಜ 09: ದೇಶದಲ್ಲಿ ಜಾತಿ, ಧರ್ಮಗಳ ನಡುವೆ ಒಡೆದು ಆಳುವ ನೀತಿ ಮತ್ತು ಹಿಂದೂ ವಿರೋಧಿ ಕಾಂಗ್ರೆಸ್ ಪಕ್ಷವನ್ನು ತೊರೆದು , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ತತ್ವ ಸಿದ್ಧಾಂತ ಒಪ್ಪಿಕೊಂಡು ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಕೆ.ಹರಿಕೃಷ್ಣ ಬಂಟ್ವಾಳ ವಿರುದ್ಧ ಕೆಲವೊಂದು ವಲಸೆ ಕಾಂಗ್ರೆಸಿಗರು ನೀಡುತ್ತಿರುವ ಸುಳ್ಳು ಹೇಳಿಕೆ ಖಂಡನೀಯ ಎಂದು ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾ ಜಿಲ್ಲಾಧ್ಯಕ್ಷ ದಿನೇಶ್ ಅಮ್ಟೂರು ಅಕ್ರೋಶ ವ್ಯಕ್ತಪಡಿಸಿದರು.
ಬಂಟ್ವಾಳ ಪ್ರೆಸ್ಕ್ಲಬ್ನಲ್ಲಿ ಜ 9 ರ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯಿಂದ ಉಚ್ಚಾಟನೆಗೊಂಡ ರಾಯಿ ಗ್ರಾಪಂ ಸದಸ್ಯ ಜಗದೀಶ ಕೊಯಿಲ ಅವರು ಇತ್ತೀಚೆಗೆ ಮಂಗಳೂರಿನಲ್ಲಿ ಕಾಂಗ್ರೆಸ್ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಲ್ಲವ ಮಹಾಮಂಡಲ ವಕ್ತಾರ ಕೆ.ಹರಿಕೃಷ್ಣ ಬಂಟ್ವಾಳ್ ಅವರನ್ನು ಬಿಲ್ಲವ ಮುಖಂಡರೇ ಅಲ್ಲ ಎಂದು ನಿಂದಿಸಿದ್ದಾರೆ ಎಂದು ಆರೋಪಿಸಿದರು.
ಈ ಹಿಂದೆ ಬಿಜೆಪಿ ಕಾರ್ಯಕರ್ತನಾಗಿದ್ದ ಜಗದೀಶ ಕೊಯಿಲ ಇವರಿಗೆ ರಾಯಿ ತಾಪಂಗೆ ಸ್ಪರ್ಧಿಸಲು ಸೀಟು ಸಿಗಲಿಲ್ಲ ಎಂದು ಪಕ್ಷವಿರೋಧಿ ಚಟುವಟಿಕೆ ನಡೆಸಿದ ಬಳಿಕ ಅವರನ್ನು ಉಚ್ಚಾಟನೆಗೊಳಿಸಲಾಗಿತ್ತು. ಆ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾಗಿದ್ದ ಹರಿಕೃಷ್ಣ ಬಂಟ್ವಾಳ ಅವರ ಕಾಲು ಹಿಡಿದು ಕಾಂಗ್ರೆಸ್ ಸೇರ್ಪಡೆಗೊಂಡ ಜಗದೀಶ ಕೊಯಿಲ ಅವರು ಇದೀಗ ಹರಿಕೃಷ್ಣರನ್ನೇ ಟೀಕಿಸುವ ಮಟ್ಟಕ್ಕೆ ಇಳಿದಿರುವುದು ನಾಚಿಕೆಗೇಡು ಎಂದು ಹೇಳಿದರು.
ಅಂದು ಸಚಿವ ಬಿ. ರಮಾನಾಥ ರೈ ಅವರನ್ನು ‘ರಹಮ್ಮತುಲ್ಲಾ’ ಎಂದು ಹೆಸರಿಟ್ಟು ಹೀನಾಯವಾಗಿ ನಿಂದಿಸುತ್ತಿದ್ದು, ರಾಯಿ- ಕೊಯಿಲ ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ ಕುದ್ರೋಳಿ ದಸರಾಕ್ಕೆ ತೆರಳುತ್ತಿದ್ದ ಸ್ತಬ್ಧ ಟ್ಯಾಬ್ಲೋಗಳಿಗೆ ಮಾಜಿ ಕೇಂದ್ರ ಸಚಿವ ಬಿ. ಜನಾರ್ಧನ ಪೂಜಾರಿ ಅವರ ‘ಶವದ ಮೆರವಣಿಗೆ’ ಹೋಗುತ್ತಿದೆ ಎಂದು ಇದೇ ಜಗದೀಶ ಹೀಯಾಳಿಸಿದ್ದರು ಎಂದು ಅವರು ಆರೋಪಿಸಿದರು.
ಕಳೆದ ಎರಡು ವರ್ಷಗಳ ಹಿಂದೆ ರಾಯಿ-ಕೊಯಿಲ ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ನಿರ್ಮಾಣಕ್ಕೆಂದು ಅನಧಿಕೃತವಾಗಿ ‘ಚಿಟ್ ಫಂಡ್’ ಇಟ್ಟಿದ್ದ ಇವರು ಸುಮಾರು 4 ಲಕ್ಷ ಮೊತ್ತದ ಹಣವನ್ನು ಫಂಡಿನ ಸದಸ್ಯರಿಗೆ ನೀಡದೆ ವಂಚಿಸಿದ್ದಾರೆ. ಈ ಬಗ್ಗೆ ನೊಂದ ಸಂತ್ರಸ್ತ ಅರಳ ಲಕ್ಷ್ಮೀಧರ ಪೂಜಾರಿ ಸಹೋದರರು ಸ್ವತ: ಸಚಿವ ರಮಾನಾಥ ರೈ ಅವರಿಗೆ ದೂರು ಸಲ್ಲಿಸಿದ್ದಾರೆ ಎಂದು ಅವರು ತಿಳಿಸಿದರು. ಕಳೆದ ಹತ್ತು ವರ್ಷಗಳ ಹಿಂದೆ ರಾಯಿ ಕೊಯಿಲ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಹಣ ಠೇವಣಿ ಇಟ್ಟಿದ್ದ ಗೋಕರ್ಣನಾಥ ಕ್ರೆಡಿಟ್ ಕೋ-ಅಪರೇಟಿವ್ ಬ್ಯಾಂಕಿನ ಉಳಿತಾಯ ಖಾತೆಯಿಂದ ಸುಮಾರು ರೂ. ಹತ್ತು ಸಾವಿರ ಮೊತ್ತದ ಹಣವನ್ನು ಅಂದು ಸಂಘದ ಅಧ್ಯಕ್ಷರಾಗಿದ್ದ ಚಂದ್ರ ಶೇಖರ ಪೂಜಾರಿ ಶಾಂತಿಪಲ್ಕೆ ಅವರ ಸಹಿ ದುರ್ಬಲಕೆ ಮಾಡಿಕೊಂಡು ಡ್ರಾ ಮಾಡಿ ವಂಚಿಸಿದ್ದಾರೆ. ಇದಕ್ಕಾಗಿ ಸಂಘದಿಂದಲೇ ಅವರನ್ನು ಹತ್ತು ವರ್ಷಗಳ ಕಾಲ ಉಚ್ಚಾಟಿಸಲಾಗಿತ್ತು ಎಂದು ವಿವರಿಸಿದರು.
ಸಿದ್ದಕಟ್ಟೆ ಸಮೀಪದ ಕರ್ಪೆಯಲ್ಲಿ ಜಲ್ಲಿ ಕಳವು, ಪಂಜಿಕಲ್ಲು ಜಾತ್ರೆ ಯುವತಿಗೆ ಚುಡಾಯಿಸಿ ಕಪಾಳ ಮೋಕ್ಷ ಮಾಡಿಕೊಂಡ ಆರೋಪವು ಇವರ ಮೇಲಿದೆ. ಕೊಯಿಲ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯಲ್ಲಿಯೂ ಹಣ ದುರ್ಬಳಕೆ ಮಾಡಿಕೊಂಡು ಸಮಿತಿಯಿಂದಲೇ ಉಚ್ಚಾಟನೆಗೊಂಡಿರುತ್ತಾರೆ ಎಂದು ಆರೋಪಿಸಿದರು.
ಈ ಹಿಂದೆ ಕೊಯಿಲ ಪ್ರದೇಶದಲ್ಲಿ ಮುಸ್ಲಿಮರ ಅಂಗಡಿ, ಮನೆಗೆ ಕಲ್ಲೆಸೆದು ಕೋಮು ಸಂಘರ್ಷ ಉಂಟು ಮಾಡುತ್ತಿದ್ದರು. ಇದಕ್ಕಾಗಿ ಅವರನ್ನು ಪಕ್ಷದಿಂದಲೇ ಬಿಜೆಪಿ ಉಚ್ಚಾಟಿಸಿತ್ತು. ಇದೀಗ ಅವರು ಬಿಜೆಪಿ ತೊರೆದ ಕೊಯಿಲ ಪ್ರದೇಶದಲ್ಲಿ ಹಿಂದೂ-ಮುಸ್ಲಿಮರು ಸೌಹಾರ್ಧತೆಯಿಂದ ಬದುಕಲು ಸಾಧ್ಯವಾಗಿದೆ. ಇಂತಹ ಕೀಳು ಮಟ್ಟದ ವ್ಯಕ್ತಿ ಹರಿಕೃಷ್ಣ ಬಂಟ್ವಾಳ್ ಅವರಂತಹ ನೈಜ, ಹಿರಿಯ ಬಿಲ್ಲವ ಮುಖಂಡರ ವಿರುದ್ಧ ಮಾತನಾಡಲು ನೈತಿಕತೆ ಇಲ್ಲ, ಅರ್ಹತೆಯೂ ಇಲ್ಲ ಎಂದು ಅವರು ಟೀಕಿಸಿದರು. ಇಂತಹ ವ್ಯಕ್ತಿಯಿಂದ ಹರಿಕೃಷ್ಣ ಬಂಟ್ವಾಳ ಅವರಂತಹ ನಾಯಕರಿಗೆ ಯಾವುದೇ ಸರ್ಟಿಪಿಕೇಟ್ ಬೇಕಿಲ್ಲ. ಬಿಲ್ಲವ ಮುಖಂಡರನ್ನು ಟೀಕಿಸಿ ಕಾಂಗ್ರೆಸಿನ ಮುಖಂಡರನ್ನು ಮೆಚ್ಚಿಸಲು ಹೊರಟ ಇವರಿಗೆ ಮುಂದಿನ ದಿನಗಳಲ್ಲಿ ಸಮಾಜವೇ ಸೂಕ್ತ ಉತ್ತರ ನೀಡಲಿದೆ ಎಂದು ಅವರು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಗಬೆಟ್ಟು ಜಿಪಂ ಸದಸ್ಯ ಎಂ.ತುಂಗಪ್ಪ ಬಂಗೇರ, ಬಿಜೆಪಿ ಹಿಂದುಳಿದ ವರ್ಗಗಳ ಘಟಕ ಅಧ್ಯಕ್ಷ ವಸಂತ ಕುಮಾರ್ ಅಣ್ಣಳಿಕೆ, ರಾಯಿ ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಕೆ.ಪರಮೇಶ್ವರ ಪೂಜಾರಿ, ಹಿಂದುಳಿದ ವರ್ಗಗಳ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಬೆಟ್ಟು, ದಲಿತ ಮುಖಂಡ ಗಂಗಾಧರ ಕೋಟ್ಯಾನ್, ರಾಯಿ ಗ್ರಾಪಂಮಾಜಿ ಅಧ್ಯಕ್ಷ ಹರೀಶ್ ಆಚಾರ್ಯ,
ಸದಸ್ಯ ರಾಘವ ಅಮೀನ್, ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ಚಂದ್ರಶೇಖರ ಪೂಜಾರಿ ಶಾಂತಿಪಲ್ಕೆ, ಪ್ರಮುಖರಾದ ತಿಮ್ಮಪ್ಪ ಪೂಜಾರಿ ಕುದ್ಮಾಣಿ, ಪ್ರವೀಣ ಅಂಚನ್ ಕೊಯಿಲ, ಲಕ್ಷ್ಮೀಧರ ಪೂಜಾರಿ ಅರಳ ಮತ್ತಿತರರು ಉಪಸ್ಥಿತರಿದ್ದರು.